WhatsApp Channel Join Now
Telegram Channel Join Now

ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಇಂದು ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಇಂದು ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದೆ. ಅಂಗಡಿಗಳು, ಶೋರೂಮ್ ಗಳು, ಗ್ಯಾರೇಜ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ.

ದೀಪಾವಳಿಯ ದಿನವಾದ ಇಂದು ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು.

ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಸ್ಟಾಲ್ ಗಳ ಎದುರು ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಹೊಸಬಟ್ಟೆ, ಪೂಜಾ ಸಾಮಗ್ರಿ, ಪಟಾಕಿ ಖರೀದಿ ಭರಾಟೆ ಜೋರಾಗಿತ್ತು.

ಎಲ್ಲಾ ರಸ್ತೆಗಳಲ್ಲಿ ಬಾಳೆಕಂದು, ಉತ್ರಾಣಿ, ಮಾವಿನಸೊಪ್ಪು, ಬಗೆಬಗೆಯ ಹೂವುಗಳು, ಕುಂಬಳಕಾಯಿ ಮೊದಲಾದವುಗಳನ್ನು ಜನರು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಪಟ್ಟಣಕ್ಕೆ ಚೆಂಡು ಹೂವು ರಾಶಿ ರಾಶಿಯಾಗಿ ಮಾರಾಟಕ್ಕೆ ಬಂದಿದೆ. ದೀಪಾವಳಿ ಎಂದರೆ ಚೆಂಡು ಹೂವುಗಳ ರಾಜ ಎಂದೆ ಅರ್ಥ. ಅದರ ಜೊತೆಗೆ ಆಕಾಶಬುಟ್ಟಿ, ಹಣತೆ, ಕೆರಕನ ವಸ್ತುಗಳ ಮಾರಾಟವೂ ಜೋರಾಗಿತ್ತು.

ವಿನಾಯಕ ವೃತ್ತ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ವರ್ತಕರು ತಮ್ಮ ಅಂಗಡಿ ಮಳಿಗೆಗಳ ಎದುರು ರಂಗೋಲಿ ಹಾಕಿ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಕಂಡು ಬಂದಿತು. ಅನೇಕರು ತಮ್ಮ ಮನೆ,ಅಂಗಡಿಗಳಲ್ಲಿ ವಿಶೇಷ ವಿದ್ಯುತ್ ದೀಪಲಂಕಾರ ಮಾಡಿದ್ದಾರೆ. ಆಕಾಶಬುಟ್ಟಿ ಕಟ್ಟಿ ಬೆಳಕಿನ ಹಬ್ಬ ಆಚರಿಸಲು ಮುಂದಾಗಿದ್ದ ದೃಶ್ಯ ಕಂಡು ಬಂದಿದೆ. 

ಗ್ರಾಮೀಣ ಪ್ರದೇಶದಲ್ಲಿ ಇಂದು ಹಬ್ಬದ ಸಿದ್ಧತೆ ಜೋರಾಗಿತ್ತು. ಕೆಮ್ಮಣ್ಣು, ಉರುಮಂಜು ತಂದು ಮನೆಯ ಗೋಡೆಗಳಿಗೆ ಬಳಿಯುವುದು, ಬೇಸಾಯದ ಸಲಕರಣೆಗಳ ತೊಳೆದು ಒಟ್ಟಾಗಿ ಜೋಡಿಸಿಟ್ಟು ಪೂಜಿಸುವುದು ರೂಢಿಯಲ್ಲಿದೆ. ಕುಂಟೆ, ನೊಗ, ಎತ್ತಿನ ಗಾಡಿ, ನೇಗಿಲು ಮುಂತಾದ ಎಲ್ಲಾ ವ್ಯವಸಾಯ ಉಪಕರಣಗಳನ್ನು ರೈತರು ಬಹಳ ಶ್ರದ್ಧೆ, ಭಕ್ತಿಯಿಂದ ಪೂಜಿಸುವ ದೃಶ್ಯ ಕಂಡು ಬಂದಿದೆ. ಮಕ್ಕಳು ಹೊಸ ಬಟ್ಟೆ ಧರಿಸಿ ಕುಣಿದು ಕುಪ್ಪಳಿಸಿದರೆ ಪಟಾಕಿ ಸದ್ದು ಕೂಡ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಈ ಬಾರಿ ಪಟಾಕಿ ಹಾವಳಿ ಹೆಚ್ಚಾಗಿ ಇಲ್ಲದಿದ್ದರೂ ಕೂಡ ಕಡಿಮೆಯೇನೂ ಇರಲಿಲ್ಲ. ಹೆಚ್ಚು ಅಪಾಯಕಾರಿಯಲ್ಲದ ಹಸಿರು ಪಟಾಕಿಗಳನ್ನು ಜನರು ಖರೀದಿಸಿದ್ದರು.




ಗ್ರಾಮದ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ:

ಮಲೆನಾಡಿನ ಪ್ರದೇಶದಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಭೂಮಿ ಹುಣ್ಣಿಮೆ ಆಗುತ್ತಿದ್ದಂತೆ ಕೆಲ ಊರುಗಳಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು, ಗರ್ಭಿಣಿಯರು ಊರು ಬಿಡುವುದು ಪದ್ದತಿ ಕಾರಣ ಗ್ರಾಮ ದೇವರಿಗೆ ಸಾರು ಹಾಕುವ ಮೊದಲು ಅವರನ್ನು ಗ್ರಾಮದಲ್ಲಿನ ಜಮೀನಿನ ಗುಡಿಸಿಲಿನಲ್ಲಿ ಅಥವಾ ಸಂಬಂಧಿಕರ ಮನೆಗಳಿಗೆ ಕಳುಹಿಸುತ್ತಾರೆ ಇನ್ನೂ ಕೆಲವರು ಊರಿನಲ್ಲಿಯೇ ಉಳಿದರೂ ಅವರು ಋತುಮತಿಯಾದರೆ ಅಥವಾ ಸಾವನ್ನಪ್ಪಿದರೆ ಇಲ್ಲವೆ ಹೆರಿಗೆಯಾದರೆ ಆ ಊರಿನಲ್ಲಿ ನೋನಿ ಆಚರಣೆ ಇರುವುದಿಲ್ಲ. ಇನ್ನೂ ಬರುವ ವರ್ಷದ ವರೆಗೂ ಕಾಯಬೇಕಾಗುತ್ತದೆ ಇಂತಹ ಪದ್ದತಿ ಪರಂಪರಾಗತವಾಗಿ ಆಚರಣೆಯಲ್ಲಿರುವುದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿ ಉಳಿಯುವರೊಂದಿಗೆ ಕಠಿಣ ಆಚರಣೆಯಿಂದಾಗಿ ಗ್ರಾಮದಲ್ಲಿ ಜಾತಿ ಬೇಧ-ಭಾವನೆ ಇಲ್ಲದೆ ಸಹೋದರತ್ವ ಸ್ನೇಹ ಸೌಹಾರ್ದತೆಯಿಂದಿರಲು ನೋನಿ ಕಾರಣವಾಗಿದೆ.

ಎಷ್ಟೇ ದ್ವೇಷ, ಅಸೂಯೆ ಇದ್ದರೂ ನೋನಿ ಆಚರಣೆಯಲ್ಲಿ ಊರು ಜನ ಸಂಘಟಿತರಾಗಿ ಒಂದು ಕಡೆ ಜಮಾಯಿಸಿ ನಿರ್ಧಾರ ಕೈಗೊಂಡು ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಜಮೀನಿನಲ್ಲಿನ ಫಸಲು ಹಾಗೂ ಜನ ಜಾನುವಾರುಗಳಿಗೆ ರೋಗ ರುಜಿನೆ ಬಾರದಂತೆ ರಕ್ಷಣೆ ನೀಡಿ ಗ್ರಾಮದಲ್ಲಿ ಕಳ್ಳತನ ಇನ್ನಿತರ ಅವಘಡಗಳು ಸಂಭವಿಸದಂತೆ ಊರ ಗಡಿರಕ್ಷಣೆ ಮಾಡು ತಾಯಿ ಎಂದು ಪ್ರಾರ್ಥಿಸಿ ಹರಕೆ ಒಪ್ಪಿಸುವುದು ವಾಡಿಕೆ.

ಬರುವೆ ಗಾಮದಬನ, ಚಿಕ್ಕಬೀರನಕೆರೆ ಬೂತಪ್ಪ, ಮಲ್ಲಾಪುರದ ಮರುಬಿನಕುಣಿ ಬೂತಪ್ಪ, ಯಕ್ಷಣಿ ಹೀಗೆ ಗವಟೂರು ಬರುವೆ, ಕಣಬಂದೂರು, ಬೆಳಕೋಡು, ಕುಕ್ಕಳಲೇ, ವಡಗೆರೆ, ಕೆರೆಹಳ್ಳಿ, ಬಟ್ಟೆಮಲ್ಲಪ್ಪ, ಹರತಾಳು, ದೊಡ್ಡಿನಕೊಪ್ಪದ ಶೀಲವಂತ ಮಕ್ಕಳ ಚೌಡಿ, ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ, ಮಾದಾಪುರ, ಆಲವಳ್ಳಿ, ಚೌಡೇಶ್ವರಿ ಬೀದಿಯಲ್ಲಿನ ಯಕ್ಷಿಣಿ, ತಮ್ಮಡಿಕೊಪ್ಪ, ಬಸವಾಪುರ, ಹೆದ್ದಾರಿಪುರ, ಕೊಳವಳ್ಳಿ,ಕೋಟೆತಾರಿಗ, ಬೆಳ್ಳೂರು, ಮೂಲೆಗದ್ದೆ, ವಿಜಾಪುರ, ಕಚ್ಚಿಗೆಬೈಲು, ಕೇಶವಪುರ, ಬಾಳೂರು, ಹಾಲುಗುಡ್ಡೆ ಮಾದ್ಲಾರದಿಂಬ, ನೇರಲುಮನೆ, ಬೆಳಂದೂರು, ಕೆದಲುಗುಡ್ಡೆ ಇನ್ನಿತರ ಗ್ರಾಮಗಳಲ್ಲಿ ಊರು ಹೊರಭಾಗದಲ್ಲಿ ಮತ್ತು ಜಮೀನಿನ ಮೇಲ್ಭಾಗದಲ್ಲಿ ನೆಲಸಿರುವ ಗ್ರಾಮ ದೇವರುಗಳಿಗೆ ನೋನಿಯ ಸಂದರ್ಭದಲ್ಲಿ ಹರಕೆ ಕುರಿ, ಕೋಳಿ, ಹಣ್ಣು-ಕಾಯಿ ಸಮರ್ಪಿಸುವುದು ಪದ್ದತಿ.

Leave a Reply

Your email address will not be published. Required fields are marked *