ಹೊಸನಗರ ತಾಲೂಕ್ ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಹೃದಯಾಘಾತದಿಂದ ನಿಧನ
ಹೊಸನಗರ, ನ.21: ತಾಲೂಕು ಬಿಜೆಪಿ ಅಧ್ಯಕ್ಷ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಹಿರಿಯ ನಾಯಕ ಮತ್ತಿಮನೆ ಸುಬ್ರಹ್ಮಣ್ಯ ಅವರು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ವಿಧಿವಶರಾಗಿದ್ದಾರೆ.
ಇಂದು ಮಧ್ಯಾಹ್ನ ಏಕಾಏಕಿ ಅಸ್ವಸ್ಥತೆಯನ್ನು ಅನುಭವಿಸಿದ ಸುಬ್ಬಣ್ಣ ಅವರನ್ನು ಕುಟುಂಬ ಸದಸ್ಯರು ತಕ್ಷಣವೇ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುಬ್ಬಣ್ಣ ಅವರು ದಶಕಗಳ ಕಾಲ ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ತಾವು ನಡೆದ ಹಾದಿಯಿಂದಲೇ ವಿಶಿಷ್ಟ ಗುರುತಿಸಿಕೊಂಡಿದ್ದರು. ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ಮುಖಂಡರವರೆಗೂ ಎಲ್ಲರೊಂದಿಗೂ ಅಕ್ಕರೆಯಿಂದ ವರ್ತಿಸುವ ಗುಣ, ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ತುರ್ತು ಕ್ರಮ ಕೈಗೊಳ್ಳುವ ಚಟುವಟಿಕೆ, ಹಾಗೂ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ನಿಲುವಿನ ಮೂಲಕ ಅವರು ಜನಮನ ಗೆದ್ದಿದ್ದರು.ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಸುಬ್ಬಣ್ಣ ಅವರ ಅಗಲಿಕೆಯಿಂದ ಒಂದು ನಿಸ್ವಾರ್ಥ ಹೋರಾಟಗಾರನನ್ನು ಕಳೆದುಕೊಂಡ ಭಾವನೆ ಸ್ಥಳೀಯರಲ್ಲಿ ಮೂಡಿದೆ.
ಸ್ಥಳೀಯ ಬಿಜೆಪಿ ಘಟಕ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಹಿತೈಷಿಗಳು, ಗ್ರಾಮಸ್ಥರು ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.ನಗರದ ಸ್ವಗೃಹದಲ್ಲಿ ಮೃತದೇಹವನ್ನು ಇರಿಸಲಾಗಿದೆ