ಹೊಸನಗರ : ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ (03-10-2022) ಸೋಮವಾರ ನಡೆದಿದೆ.
ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಕೋಡು ನಿವಾಸಿ ಜಯಮ್ಮ(45) ಕಾಡುಕೋಣ ದಾಳಿಗೆ ತುತ್ತಾದ ಮಹಿಳೆಯಾಗಿದ್ದಾರೆ.
ಬೆಳಿಗ್ಗೆ ಎದ್ದು ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಮಹಿಳೆಯನ್ನು ಕೋಡಿನಿಂದ ತಿವಿದು ನಂತರ ಎತ್ತಿ ಬಿಸಾಡಿದೆ.ಮಹಿಳೆಯ ಕೈಮುರಿತವಾಗಿದ್ದು, ಹೊಟ್ಟೆ, ಹಣೆ, ಮೇಲೆ ತಿವಿದ ಗಾಯಗಳಾಗಿವೆ.
ಮಹಿಳೆಯ ಚೀರಾಟ ಕೇಳಿ ತುಸುದೂರದಲ್ಲಿದ್ದ ಪತಿ ನರಸಿಂಹ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾಡುಕೋಣ ಅಲ್ಲಿಂದ ಮರೆಯಾಗಿದೆ. ಕೂಡಲೇ ತೀವ್ರ ಗಾಯಗೊಂಡಿದ್ದ ಜಯಮ್ಮರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು. ಬಳಿಕ ಈಗ ಮಂಗಳೂರು ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡುಕೋಣ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ನಗರ ವಲಯ ಅರಣ್ಯಾಧಿಕಾರಿ ಸಂಜಯ್ ಬೇಟಿ ನೀಡಿ ಪರಿಶೀಲಿಸಿದರು. ಬಳಿಕ ಸೂಕ್ತ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
 
                         
                         
                         
                         
                         
                         
                         
                         
                         
                        