ಕಸ್ತೂರಿ ರಂಗನ್ ವರದಿಗೆ ತಾತ್ಕಾಲಿಕ ಬ್ರೇಕ್ : ನಿಟ್ಟುಸಿರು ಬಿಟ್ಟ ಮಲೆನಾಡಿಗರು

ಪಶ್ಚಿಮ ಘಟ್ಟ ಪ್ರದೇಶಗಳ ಜನಜೀವನದಲ್ಲಿ ಭಯ ಹುಟ್ಟಿಸಿರುವ ಡಾ. ಕೆ. ಕಸ್ತೂರಿ ರಂಗನ್‌ ಸಮಿತಿ ವರದಿಯನ್ನು ಜಾರಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಮಿತಿಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ.

ವರದಿ ಜಾರಿಗೆ ತಾತ್ಕಾಲಿತ ತಡೆ ನೀಡಲಾಗಿದೆ ಎಂದಿರುವ ಭೂಪೇಂದ್ರ ಯಾದವ್‌, ವಸ್ತುಸ್ಥಿತಿ ಅಧ್ಯಯನಕ್ಕೆ ಐಎಫ್‌ಎಸ್‌ ಅಧಿಕಾರಿ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ಪಶ್ಚಿಮಘಟ್ಟ ಪ್ರದೇಶದಲ್ಲಿ ವಸ್ತುಸ್ಥಿತಿಯನ್ನು ಅಧ್ಯಯನ ನಡೆಸಿ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.


ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನೆಲದಲ್ಲಿ ಸಮೀಕ್ಷೆ ಮಾಡದೆ, ಉಪಗ್ರಹದ ಮೂಲಕ ಸಮೀಕ್ಷೆ ನಡೆಸಿ ಹಸಿರಾಗಿ ಕಾಣುವುದೆಲ್ಲವೂ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್‌ ಸಮಿತಿ ತೀರ್ಮಾನ ಮಾಡಿರುವುದು ಸರಿಯಲ್ಲ.

 ಈ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೇ, ಕೇವಲ ಸ್ಯಾಟಲೈಟ್ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ., ಅಲ್ಲಿಯ ಜನಜೀವನ, ಪರಿಸರ ಒಟ್ಟಾಗಿದ್ದು, ಹಸಿರನ್ನು ಅವಲಂಬಿಸಿರುವ ಜನರಿದ್ದಾರೆ. ಕಾಫಿ, ಅಡಿಕೆ , ತೆಂಗು, ರಬ್ಬರ್ ತೋಟಗಳಿದ್ದು, ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೇ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದವಾಗಿದೆ ಎಂದರು.

ನಿವೃತ್ತ ಐಎಫ್‍ಎಸ್ ಅಧಿಕಾರಿ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾದ ಆರ್. ಸಿ. ಕುಮಾರ್, ಪರಿಸರ ಸೂಕ್ಷ್ಮ ವಲಯದ ನಿರ್ದೇಶಕರ ಸಲಹೆಗಾರರು ಸಂಚಾಲಕರು, ಇವರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಒಂದು ವರ್ಷದ ಅವಧಿಯನ್ನು ನೀಡಲಾಗಿದೆ. ಜನರೊಂದಿಗೆ ಮಾತನಾಡಿ, ಅಲ್ಲಿ ಜನ ಬೆಳೆದಿರುವ ಬೆಳೆಗಳು, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಭೂ ಪ್ರದೇಶದ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡು ವರದಿ ನೀಡಬೇಕು. ಅಲ್ಲಿಯವರೆಗೆ ಈ ಅಧಿಸೂಚನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಅದರ ಪ್ರತಿಯನ್ನೂ ನೀಡಿದ್ದಾರೆ. ಪಶ್ಚಿಮ ಘಟ್ಟಗಳಿರುವ ಎಲ್ಲಾ ರಾಜ್ಯಗಳಿಗೆ ಅದನ್ನು ಪ್ರತಿಪಾದಿಸಿ, ಉಳಿಸುವ ಮತ್ತೊಂದು ಅವಕಾಶ ದೊರೆತಿದೆ. ರಾಜ್ಯ ಮಟ್ಟದಲ್ಲಿಯೂ ಕೂಡ ಸಮಿತಿಯ ವಿಚಾರಣಾ ಉಲ್ಲೇಖಗಳ ಆಧಾರದ ಮೇಲೆ ಉನ್ನತ ಮಟ್ಟದ ಸಮಿತಿಯನ್ನೂ ಸಹ ರಚಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಗೃಹ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ರವರು ವಿಶೇಷ ಕಾಳಜಿ ವಹಿಸಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವಿಷಯವನ್ನು ಮಂಡಿಸಿ ದೆಹಲಿಗೆ ನಿಯೋಗ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಬಿ ವೈ ರಾಘವೇಂದ್ರ, ಅರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ನಿಯೋಗದಲ್ಲಿದ್ದರು.

ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ಹೋರಾಟಕ್ಕೆ ರೂಪುರೇಷೆಗಳು ಸಿದ್ದವಾಗಿತ್ತು : 

ಈ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮಲೆನಾಡಿನಾದ್ಯಂತ ಬೃಹತ್ ಹೋರಾಟಕ್ಕೆ ರೂಪುರೇಷೆಗಳು ಸಿದ್ದವಾಗಿದ್ದವು.


ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪ್ರಮುಖರಾದ ಕಲ್ಲೂರು ಮೇಘರಾಜ್,ಅರ್ ಎ ಚಾಬುಸಾಬ್ ,ಎಸ್ ವಿ ರಾಜಮ್ಮ,ಟಿ ಆರ್ ಕೃಷ್ಣಪ್ಪ ರವರು ಜುಲೈ 16 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು 
 ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿದ್ದರು.ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

ಚಿಕ್ಕಮಗಳೂರಿನ ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ದಿಗಂತ್ ಬಿಂಬೈಲು ಕಸ್ತೂರಿ ರಂಗನ್ ವರದಿಯ ಬಗ್ಗೆ ಸವಿಸ್ತಾರವಾಗಿ ಲೇಖನ ಬರೆದು ಉಚಿತವಾಗಿ ಪುಸ್ತಕವನ್ನು ತಲುಪಿಸಿ ಮಲೆನಾಡಿನಾದ್ಯಂತ ಜನರನ್ನು ಎಚ್ಚರಿಸಿದ್ದರು.

ಒಟ್ಟಾರೆಯಾಗಿ ಆರಗ ಜ್ಞಾನೇಂದ್ರ ಮತ್ತು ಹರತಾಳು‌ ಹಾಲಪ್ಪ ರವರ ವಿಶೇಷ ಕಾಳಜಿಯಿಂದ ಸದ್ಯಕ್ಕೆ ಮಲೆನಾಡಿಗರ ತಲೆಯ ಮೇಲಿನ ತೂಗುಗತ್ತಿ ತಪ್ಪಿದ್ದು ಮುಂದಿನ ಸಮಿತಿ ಯಾವ ರೀತಿ ವರದಿ ತಯಾರಿಸುವುದು ಎಂಬುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *