ರಿಪ್ಪನ್ ಪೇಟೆ: ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಉಪನ್ಯಾಸಕ ವೃಂದ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರಿಂದ ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಂದು ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮಹ್ಮದ್ ನಜ್ ಹತ್ ಉಲ್ಲಾ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರತಿಭಾನ್ವಿತ ರಾಗಿದ್ದು ಅವರುಗಳಿಗೆ ಉತ್ತಮ ಅವಕಾಶಗಳನ್ನು ದೊರೆತರೆ ಸಾಧನೆಯನ್ನು ಮಾಡುತ್ತಾರೆ ಎಂಬುದಕ್ಕೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ.
ಯಾವುದೇ ಟ್ಯೂಶನ್ ಕ್ಲಾಸ್ ಸಹಾಯವಿಲ್ಲದೆ ವಿಜ್ಞಾನ ವಿಭಾಗದ ಹರ್ಷ ಎನ್ನುವ ವಿದ್ಯಾರ್ಥಿ 600 ಅಂಕಗಳಿಗೆ 586 ಅಂಕಗಳನ್ನು ಪಡೆದುಕೊಂಡಿದ್ದಾನೆ. ಹಾಗೆಯೇ ಪರೀಕ್ಷೆ ಬರೆದ 178 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲವೊಂದಿದ್ದರೆ ವಿದ್ಯಾರ್ಥಿಗಳು ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಉದಾಹರಣೆಯಾಗಿದ್ದಾರೆ. ಅತ್ಯುನ್ನತ ಶ್ರೇಣಿಯನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನವು ಯಶಸ್ವಿಯಾಗಿ ಉನ್ನತ ಉದ್ಯೋಗಗಳನ್ನು ಅಲಂಕರಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಡಿ.ಟಿ ಸೋಮಶೇಖರ್,ಉಪಾಧ್ಯಕ್ಷರಾದ ನಾಗೇಶ್. ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ತೊರೆಗೆದ್ದೆ ವಾಸಪ್ಪಗೌಡ, ಬಂಡಿ ದಿನೇಶ್, ಮಂಜುಳ ರಾಘವೇಂದ್ರ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಹಾಲಪ್ಪ ಸಂಕೂರು ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವಿಜ್ಞಾನ ವಿಭಾಗದಲ್ಲಿ 600 ಕ್ಕೆ 586 ಅಂಕ ಪಡೆದ ದೂನ ಗ್ರಾಮದ ಹರ್ಷ ಡಿ ಟಿ :
ರಿಪ್ಪನ್ ಪೇಟೆ ಸಮೀಪದ ದೂನ ಗ್ರಾಮದ ತಿಪ್ಪೇಶ್ ಹಾಗೂ ವೀಣಾ ದಂಪತಿಗಳ ಪುತ್ರನಾದ ಹರ್ಷ ಡಿ ಟಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.ಇವರು ರಿಪ್ಪನ್‌ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಪ್ರೌಡ ಶಿಕ್ಷಣವನ್ನು ಪಟ್ಟಣದ ಸರ್ಕಾರಿ ಪ್ರೌಡಶಾಲೆಯಲ್ಲಿ ಪಡೆದಿರುತ್ತಾರೆ.
ಕೃಷಿ ಕುಟುಂಬದಲ್ಲಿ ಬೆಳೆದು ಯಾವುದೇ ಟ್ಯೂಷನ್ ಸಹಾಯವಿಲ್ಲದೆ ಅಧ್ಬುತ ಸಾಧನೆಗೈದಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಹರ್ಷ ರವರಿಗೆ ದೂನ ಹಾಗೂ ರಿಪ್ಪನ್‌ಪೇಟೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿ ಹರ್ಷ ಡಿ ಟಿ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಸಂಸ್ಥೆಯಿಂದ ಸನ್ಮಾನ :
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಹೊಸನಗರ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುವ ಹರ್ಷ ಟಿ ಡಿ ರವರಿಗೆ ಅಮೃತ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆವರಣದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂದರ್ಶನದ ವೀಡಿಯೋ ಇಲ್ಲಿ ವೀಕ್ಷಿಸಿ👇