ತೀರ್ಥಹಳ್ಳಿ : ಹಾಡುಹಗಲೇ ಮನೆಯ ಬೀಗ ಮುರಿದು ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಹಾಗೂ
ನಗದು ಹಣವನ್ನು ದೋಚಿದ ಘಟನೆ ತಾಲೂಕಿನ ಸಾಲೂರು ಗ್ರಾಪಂ ವ್ಯಾಪ್ತಿಯ ಮಾರಿಗುಣಿ ಸಮೀಪದ ಹೊನ್ನೆಕಟ್ಟೆಯ ಮಂಜುನಾಥ ಎಂಬುವವರ ಮನೆಯಲ್ಲಿ ಮಂಗಳವಾರ ನೆಡೆದಿದೆ.
ಈ ಘಟನೆಯಲ್ಲಿ 90 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಸೇರಿದಂತೆ 7 ಸಾವಿರ ನಗದು ಹಣ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಇವರ ಮನೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಎರಡೂ ಭಾಗದಲ್ಲಿ ಅಕ್ಕಪಕ್ಕ ಮನೆಗಳಿದ್ದರೂ ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ ನಡೆಸಿರುವುದು ವಿಶೇಷವಾಗಿದೆ. ವಸ್ತುಗಳನ್ನು ದೋಚಿದ ನಂತರ ಕಳ್ಳರು ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರ ತಮ್ಮನ ಮನೆಯಲ್ಲಿ ಗೃಹಪ್ರವೇಶ ಇದ್ದು ಅದರ ಸಲುವಾಗಿ ಮಂಗಳವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿ ಮಂಜುನಾಥ್ ಅವರ ಮನೆಯವರೆಲ್ಲರೂ ಪಕ್ಕದ ಹಳ್ಳಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಎದುರು ಬಾಗಿಲಿನ
ಬೀಗದ ಚಿಲಕ ಮುರಿದು ಒಳ ನುಗ್ಗಿ ಬೆಡ್ ರೂಮಿನಲ್ಲಿದ್ದ ಬೀರಿನಲ್ಲಿದ್ದ ಆಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ಥಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು
ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿದ್ದು ಕಳ್ಳರ ಬಂಧನಕ್ಕೆ ತನಿಖೆ ನಡೆಯುತ್ತಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.