ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಶೇಕಡಾ 40ರಷ್ಟು ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭಾರೀ ಸುದ್ದಿಯಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಇಂದು ಏಪ್ರಿಲ್ 12ರಂದು ಮಂಗಳವಾರ ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಅವರ ಮೃತದೇಹ ಸಿಕ್ಕಿದೆ.ಅಲ್ಲದೆ ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಮಾಧ್ಯಮಗಳಿಗೂ ಕಳುಹಿಸಿದ್ದು, ನನ್ನ ಪತ್ನಿ ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.
ನನ್ನ ಜೊತೆ ಬಂದಿರುವ ಇಬ್ಬರು ಸ್ನೇಹಿತರು ನನ್ನ ಸಾವಿಗೆ ಕಾರಣವಲ್ಲ, ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ. ಸಚಿವರ ವಿರುದ್ಧ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು , ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಎಂದು ಮೆಸೇಜ್ನಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಂತೋಷ್ ಪಾಟೀಲ್ ಮನೆಯಿಂದ ಕಾಣೆಯಾಗಿದ್ದರು.
ನನಗೇನೂ ಗೊತ್ತಿಲ್ಲ: ಈಶ್ವರಪ್ಪ
ಸಂತೋಷ್ ಪಾಟೀಲ್ ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂದು ನನಗೆ ಗೊತ್ತಿಲ್ಲ, ನನ್ನ ಮೇಲೆ ಆರೋಪ ಮಾಡಿದ್ದು ನಿಜ, ಆದರೆ ಏಕೆ ಆರೋಪ ಮಾಡಿದ್ದಾರೆ ಗೊತ್ತಿಲ್ಲ, ಕೇಳೋಣವೆಂದರೆ ಅವರೇ ಇಲ್ಲವಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಮಾಧ್ಯಮಗಳಿಂದಲೇ ಗೊತ್ತಾಗಿರುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.