50 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಸಾಗಿಸುತ್ತಿದ್ದ ಮೂವರ ಬಂಧನ :

 ಲಕ್ಷಾಂತರ ರೂ. ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಾಗರ ತಾಲ್ಲೂಕಿನ ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್‌ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ.

ಅರ್ಧ ಕೆ.ಜಿ ಅಂಬರ್ಗ್ರೀಸ್ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅಂಬರ್ಗ್ರೀಸ್ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ. ಇವರಿಂದ ಅರ್ಧ ಕೆ.ಜಿಯಷ್ಟು ಅಂಬರ್ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಾಗರದಿಂದ ಮಂಗಳೂರಿಗೆ ಕೊಂಡೊಯ್ದು ಮಾರಾಟಕ್ಕೆ ಇವರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ತಿಮಿಂಗಿಲ ವಾಂತಿಗೇಕೆ ಇಷ್ಟು ಡಿಮಾಂಡ್?

ತಿಮಿಂಗಿಲ ವಾಂತಿ ಅಥವಾ ಅಂಬರ್ಗ್ರೀಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಸ್ಪರ್ಮ್ ತಿಮಿಂಗಲ ಎನ್ನುವ ಪ್ರಭೇದದ ಕರುಳಿನಲ್ಲಿ ಹುಟ್ಟುವ ಘನ ಮೇಣದಂತಹ ಅಂಬರ್ಗ್ರೀಸ್‌ಗೆ ಹೆಚ್ಚು ಬೇಡಿಕೆ. ಇದನ್ನು ಸುಗಂಧ ದ್ರವ್ಯ ಮತ್ತು ಮಾದಕ ವಸ್ತು ತಯಾರಿಕೆ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂಬರ್ಗ್ರೀಸ್‌ಗೆ ಹೆಚ್ಚು ಬೇಡಿಕೆ ಇದೆ.

ಮಾರಾಟ, ಸಾಗಣೆ ಅಕ್ರಮ

ಅರಣ್ಯ ಕಾಯ್ದೆ ಅಡಿ ಅಂಬರ್ಗ್ರೀಸ್ ಸಾಗಣೆ ಮತ್ತು ಮಾರಾಟಕ್ಕೆ ನಿಷೇಧವಿದೆ. ಹೀಗಿದ್ದೂ ಸಾಗರದಲ್ಲಿ ಅಂಬರ್ಗ್ರೀಸ್ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದರ ಹಿಂದೆ ದೊಡ್ಡ ಜಾಲ ಇರುವ ಕುರಿತು ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಸಾಗರ ವಿಭಾಗದ ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ನಗರ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಪಿಎಸ್‌ಐ ಟಿ.ಡಿ. ಸಾಗರಕರ್, ಕಾರ್ಗಲ್ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿ ಸಂತೋಷ್ ನಾಯ್ಕ್, ಹಜರತ್ ಅಲಿ, ಪ್ರವೀಣ್ ಕುಮಾರ್, ರತ್ನಾಕರ್, ಮಲ್ಲೇಶ್, ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *