ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡಕ್ಕೆ ಸಿಲುಕಿದ ಕೆ.ಎಸ್. ಈಶ್ವರಪ್ಪ ಕೊನೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಿವಮೊಗ್ಗದಿಂದ ಇಂದು ರಾತ್ರಿ ನಗರಕ್ಕೆ ಆಗಮಿಸಿದ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸದಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿ ಇಲ್ಲದ ಕಾರಣ ಸೋಮವಾರ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆಯಿದೆ.
ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವ ವೇಳೆ ಸಿಎಂ ನಿವಾಸದ ಬಳಿ ಹೈಡ್ರಾಮವೇ ನಡೆಯಿತು. ಅಪಾರ ಪ್ರಮಾಣದಲ್ಲಿ ನೆರೆದಿದ್ದ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸಲ್ಲಿಸದಂತೆ ಘೋಷಣೆ ಕೂಗಿದರು. ಈಶ್ವರಪ್ಪ ರಾಜೀನಾಮೆ ಸಲ್ಲಿಕೆ ವೇಳೆ ಕುರುಬ ಸಮುದಾಯದ ಸಚಿವರಾದ ಬೈರತಿ ಬಸವರಾಜ ಹಾಗೂ ಎಂಟಿಬಿ ನಾಗರಾಜ್ ಉಪಸ್ಥಿತರಿದ್ದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದು, ಮುಂದಿನ ಕ್ರಮವಾಗಿ ರಾಜ್ಯಪಾಲರಿಗೆ ಕಳುಹಿಸುವುದಾಗಿ ತಿಳಿಸಿದರು.
		 
                         
                         
                         
                         
                         
                         
                         
                         
                         
                        
