ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ, ಭೂಮಿ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಾಂತವೇರಿ ಗೋಪಾಲಗೌಡರ ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರ ರಾಜಕಾರಣವೆಂಬುದು ಬರಿಯ ಘೋಷಣೆಯ ನೀರಸವಾದ ಹೋರಾಟವಾಗಿರಲಿಲ್ಲ. ಇವರ ಉಳುವವನೇ ಹೊಲದೊಡೆಯ ಉದ್ಘೋಷಣೆಯ ಮೂಲಕ ರಾಜ್ಯದಲ್ಲಿ ಭೂ ಸುಧಾರಣೆ ಜಾರಿಗೆ ಬಂದಿತು. ಸುಮಾರು 7.30 ಲಕ್ಷಕ್ಕಿಂತಲೂ ಹೆಚ್ಚು ರೈತ ಕುಟುಂಬಗಳು ಭೂಮಾಲೀಕತ್ವ ಪಡೆಯಲು ಸಾಧ್ಯವಾಯುತು ಎಂದರು.
ಶಾಂತವೇರಿ ಗೋಪಾಲಗೌಡರ ಒಡನಾಡಿಗಳು ಹಾಗೂ ಮಾಜಿ ಸಚಿವರು ಆದ ಕಾಗೋಡು ತಿಮ್ಮಪ್ಪ ಮಾತನಾಡಿ ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣವನ್ನು ತಳಮಟ್ಟದಿಂದ ರೂಪಿಸಿ ಚಳುವಳಿಯ ರಾಜಕಾರಣ ಮತ್ತು ಶಾಸನಸಭೆಯ ರಾಜಕಾರಣ ಎರಡನ್ನೂ ಬೆಸೆದ ಧೀಮಂತ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಆಗಿದ್ದರು. ಕರ್ನಾಟಕದ ರಾಜಕಾರಣ ಗೋಪಾಲಗೌಡ ರಲ್ಲಿ ನಿಷ್ಟುರ ಪ್ರಾಮಾಣಿಕ ರಾಜಕಾರಣಿಯ ಮಾದರಿಯನ್ನು ಆಗಾಗ್ಯೆ ಹುಡುಕುತ್ತಿರುತ್ತದೆ. ಶಾಂತವೇರಿ ಗೋಪಾಲಗೌಡರ ಹಲವಾರು ಜನಪರ ಚಳುವಳಿಗಳು ಹಾಗೂ ಹೋರಾಟಗಳು ಅವರಲ್ಲಿ ದಣಿವರಿಯದ ಚಳುವಳಿಯ ಸ್ಪೂರ್ತಿ ಮೂಲವನ್ನು ಹುಡುಕುತ್ತಿರುತ್ತದೆ ಎಂದರು.
ಮಾಜಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಸಾಭಿಮಾನ ಹೋರಾಟ ಪ್ರಾಮಾಣಿಕತೆಯ ಸಂಕೇತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ರವರು ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದರು. ತಮ್ಮ ಬದುಕಿನ ಕ್ಷಣ ಕ್ಷಣವನ್ನು ಜನರಿಗಾಗಿ ತೊಡಗಿಸಿಕೊಂಡ ಮಹಾನ್ ಚೇತನ ರಾಗಿದ್ದರು ಶಾಂತವೇರಿ ಗೋಪಾಲಗೌಡರು ಎಂದರು.
ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್. ಹಿರಿಯ ಸಮಾಜವಾದಿ ಪುಟ್ಟಯ್ಯ ಮಲೆನಾಡು ಪ್ರತಿನಿಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್. ಹೆದ್ದರಿಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಗಂಗಾಧರ್. ಜೆಡಿಎಸ್ ರಾಜ್ಯ ಮುಖಂಡ ಆರ್. ಎ.ಬಾಬುಸಾಬ್ ಇನ್ನಿತರರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ವಹಿಸಿದ್ದರು.
ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಸಮಸಮಾಜ ಮತ್ತು ಶಾಂತವೇರಿ ಗೋಪಾಲಗೌಡರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು
 
                         
                         
                         
                         
                         
                         
                         
                         
                         
                        

