ರಿಪ್ಪನ್‌ಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯೆ ಬಿಜೆಪಿ ಸರಕಾರಗಳ ಮೊದಲ ಆದ್ಯತೆಯಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು .
ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಳಗಲ್ಲು ಗ್ರಾಮದಲ್ಲಿ ಸುಮಾರು 26.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಶಂಕುಸ್ಥಾಪನೆ ಮತ್ತು ಕೋಡೂರು ಗ್ರಾಮದ ಸ.ನಂ.14ರಲ್ಲಿ ಪಿಕಪ್ ಚಾನಲ್ ಕಾಮಗಾರಿ ಶ್ರೀ ಶಂಕರೇಶ್ವರ ದೇವಸ್ಥಾನದ ರಸ್ತೆ, ಹಳೇಕೋಟೆ ರಸ್ತೆ ಮರು ಡಾಂಬರಿಕರಣ ಕಾಮಗಾರಿ ಗುದ್ದಲಿಪೂಜೆ, ಶಾಖವಳ್ಳಿ – ಕೋಡೂರು ರಸ್ತೆ, ಹಿಂಡ್ಲೆಮನೆ ಸರ್ಕಾರಿ ಶಾಲೆಯ ಹೆಚ್ಚುವರಿ ಕೊಠಡಿ, ಕೆ.ಕುನ್ನೂರು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ 94ಸಿ ಅಡಿ 23 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರ ಸರಕಾರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಜನರ ಜೀವನದ ಬಗ್ಗೆ ಹೆಚ್ಚು ಆದ್ಯತೆ ನೀಡಿ ದೇಶದಲ್ಲಿಯೆ 150ಕೋಟಿ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವ ಮೂಲಕ 5ಲಕ್ಷ ಕೋಟಿ ಹಣ ವ್ಯಯ ಮಾಡಿ ಕೊರೊನಾ ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಗಲಿರುಳು ಶ್ರ ಮಿಸುತ್ತಿದೆ ಎಂದರು.
ದಲಿತರ ಸಾಮಾನ್ಯ ಮಕ್ಕಳಿಗೆ ವಿದ್ಯೆ ಕೊಟ್ಟರೆ ಬದುಕಿರುವವರೆಗೂ ಇರುತ್ತದೆ ಮಕ್ಕಳಿರುವಾಗಲೇ ಸಂಸ್ಕಾರವಿತ ಬದುಕಿಗೆ ಶಿಕ್ಷಣ ಅಗತ್ಯತೆ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿವೆ ಎಂದರು.
ಸಾಗರ ಕ್ಷೇತ್ರದ ಶಾಸಕ,ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಮಾತನಾಡಿ, ವಸತಿ ಶಾಲೆಗಳು ಸದಾ ಕ್ರಿಯಾಶೀಲ ಚಟುವಟಿಕೆ ಕೇಂದ್ರಗಳಾಗಬೇಕು. ಈಗಾಗಲೇ ಬಗರು ಹುಕಂ ಉಪಸಮಿತಿಯನ್ನು ರಚಿಸಲಾಗಿದ್ದು ಉಪಸಮಿತಿಯ ವರದಿಯನ್ನಾಧರಿಸಿ ಕಾನು ಕರಾಬ್, ಅರಣ್ಯ, ಗೋಮಾಳ, ಡೀಮ್ಡ್ ಫಾರೆಸ್ಟ್ ಹೀಗೆ ಅರಣ್ಯ ಇಲಾಖೆಯವರ ಜಾಗದಿಂದಾಗಿ ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಪರದಾಡುವಂತಾಗಿದೆ. ಈ ಬಗ್ಗೆ ಕಾನೂನಿನ ತೊಡಿಕಿನಿಂದಾಗಿ ಮಂಜುರಾತಿ ಪತ್ರ ನೀಡಲು ಅಡಚಣೆಯಾಗುತ್ತಿದೆ. ಈ ಹಿಂದಿನ ಸರ್ಕಾರಗಳು ಬಗರ್ ಹುಕುಂ ಹೆಸರಿನಲ್ಲಿ ಕಾಲ ಕಳೆದರೆ ಹೊರತು ಯಾವುದನ್ನು ಅನುಷ್ಠಾನ ಮಾಡಲು ತಯಾರಿರಲಿಲ್ಲ. ಈಗಿನ ಸರ್ಕಾರದ ಮುಖ್ಯಮಂತ್ರಿಗಳು, ಕಂದಾಯ ಸಚಿವರ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಲಾಗಿದ್ದು ಮುಂದಿನ ಒಂದೆರಡು ತಿಂಗಳಲ್ಲಿ ಅರಣ್ಯ ಒತ್ತುವರಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗೆ ಪರಿಹಾರ ದೊರಯುವುದೆಂದು ಆಶಾಭಾವನೆ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ 23 ಫಲಾನುಭವಿಗಳಿಗೆ 94 c ಹಕ್ಕುಪತ್ರವನ್ನು ವಿತರಿಸಲಾಯಿತು.
ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗಾರಾಜ್.ಕೆ, ತಹಶೀಲ್ದಾರ್ ಎಸ್.ವಿ.ರಾಜೀವ್, ತಾ.ಪಂ.ಇಒ ಸಿ.ಆರ್.ಪ್ರವೀಣ್‌ಕುಮಾರ್, ಗ್ರಾ.ಪಂ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.