ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ನಿರ್ಮಿಸಲಾಗುತ್ತಿರುವ ಜಿ ಪ್ಲಸ್ 2 ವಸತಿಗೃಹಗಳಿಗೆ ಮೂಲಸೌಲಭ್ಯ ಕಲ್ಪಿಸಲು 7.61 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ನಗರೋತ್ಥಾನ (ಹಂತ 3) ಅನುದಾನದಲ್ಲಿ 100ಕೋಟಿ ರೂ. ಮಂಜೂರಾಗಿದ್ದು, 92.39 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಾಕಿ ಉಳಿದಿರುವ ಮೊತ್ತವನ್ನು ಮಾರ್ಗಸೂಚಿ ಪ್ರಕಾರ ವೆಚ್ಚ ಮಾಡಲು ಕ್ರಿಯಾ
ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಸಭೆಗೆ ತಿಳಿಸಿದರು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 5.15 ಕೋಟಿ.ರೂ. ಅನುದಾನಕ್ಕೆ ಬದಲಿ ಪ್ರಸ್ತಾವಿತ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಒಟ್ಟು
9.25 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕಾಲೊನಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿಗಳಿಗೆ 1.60 ಕೋಟಿ ರೂ. ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಸುಶಾಸನ ಭವನ ನಿರ್ಮಾಣದ ಕಾಮಗಾರಿಗೆ 1.60 ಕೋಟಿ ರೂ.ಗೆ ಅನುಮೋದನೆ ದೊರೆತಿದೆ.
ಇನ್ನುಳಿದ 5.15 ಕೋಟಿ ರೂ. ಗಳಿಗೆ ಬದಲಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇದರಲ್ಲಿ ಸೀಗೆಹಟ್ಟಿಯಲ್ಲಿ ವ್ಯಾಯಾಮ ಶಾಲೆ ಮತ್ತು ಗ್ರಂಥಾಲಯ ಕಟ್ಟಡ, ಕೃಷಿ ಕಚೇರಿಯಲ್ಲಿ ಪಾರ್ಕ್ ಅಭಿವೃದ್ಧಿ, ಬೀದಿ ದೀಪಗಳ ಸುಧಾರಣೆ ಮತ್ತು ಮಹಾತ್ಮಾ ಗಾಂಧಿ ಪಾರ್ಕ್ ಅಭಿವೃದ್ಧಿ
ಕಾಮಗಾರಿಗಳನ್ನು ಉದ್ದೇಶಿಸಲಾಗಿದೆ ಎಂದರು.