Ripponpete | ಬರುವೆ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿದೆಯಾ ಕಳಪೆ ನೀರಿನ ಟ್ಯಾಂಕ್..?? ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟವಾ..!!??

Ripponpete | ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿದೆಯಾ ಕಳಪೆ ನೀರಿನ ಟ್ಯಾಂಕ್..??

ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಶಾಲೆ ಆವರಣದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ವಾಟರ್ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಕಳಪೆಯಾಗಿದ್ದು ಮುಂದಿನ ದಿನಗಳಲ್ಲಿ ಭಾರಿ ಅನಾಹುತಕ್ಕೆ ಎಡೆ ಮಾಡಿಕೊಡಲಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಅಭಿಪ್ರಾಯ ಕೇಳಿಬರುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಕೇಂದ್ರ ಜಲಶಕ್ತಿ ಮಂತ್ರಾಲಯವು ಜಲಜೀವನ್ ಮಿಷನ್‌ ಅಡಿಯಲ್ಲಿ ಅನುಷ್ಠಾನಕ್ಕೆ ತಂದ ಮನೆ ಮನೆ ಗಂಗೆ (ಹರ್‌ ಘರ್‌ ಜಲ್‌) ಯೋಜನೆಯು ಪಟ್ಟಣದಲ್ಲಿ ಗ್ರಾಪಂ ಆಡಳಿತದಿಂದ ವಿಶೇಷ ಆಸಕ್ತಿಯಿಂದ ತ್ವರಿತವಾಗಿ ನಡೆಯುತ್ತಿದ್ದು ಸ್ವಾಗತಾರ್ಹ..

ಆದರೆ ಪಟ್ಟಣದ ಹಳೇ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಶಾಲೆಯ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ 50 ಸಾವಿರ ಲೀ ಸಾಮರ್ಥ್ಯದ ವಾಟರ್ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಕಳಪೆಯಾಗಿದ್ದು ಮುಂದೆ ಭಾರಿ ಅನಾಹುತವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತಿದೆ….


ವಾಟರ್ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಬರುವೆ ಗ್ರಾಮದಲ್ಲಿ ಸಾಕಷ್ಟು ಜಾಗವಿದ್ದರೂ ಸರ್ಕಾರಿ ಶಾಲೆಯ ಮಕ್ಕಳು ಆಟವಾಡುವ ಮೈದಾನವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಇರುವ ಅಲ್ಪ ಸ್ವಲ್ಪ ಮೈದಾನದಲ್ಲಿ ಆಟವಾಡಲು ಆತಂಕದ ವಾತಾವರಣ ನಿರ್ಮಾಣವಾಗಿದೆ.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಆಟವಾಡುವ ಸಮಯದಲ್ಲಿ ಟ್ಯಾಂಕ್‌ ಧರೆಗುರುಳಿದರೇ ದೊಡ್ಡ ದುರಂತ ಸಂಭವಿಸುವುದು ನಿಶ್ಚಿತ.

50 ಸಾವಿರ ಲೀ ಸಾಮರ್ಥ್ಯದ ಟ್ಯಾಂಕ್ ನ ಕಾಮಗಾರಿಯನ್ನು ಶಾಲಾ ಮೈದಾನದಲ್ಲಿ ನಿರ್ಮಿಸಲು ಅನುಮತಿ ನೀಡಿ ಎಂದು ಶಾಲಾಭಿವೃದ್ದಿ ಸಮಿತಿಗೆ ನವೆಂಬರ್ 22 ರಂದು ಗ್ರಾಮಾಡಳಿತ ಮನವಿ ಮಾಡಿಕೊಂಡಿದೆ, ಮಾರನೇ ದಿನ SDMC ಸಮಿತಿಯವರು ಕೆಲವರ ಒತ್ತಡಕ್ಕೆ ಮಣಿದು ಸಭೆ ನಡೆಸಿ ಬಿಇಒ ರವರಿಗೆ ಪತ್ರ ಬರೆದಿದ್ದಾರೆ  ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಈ ಬಗ್ಗೆ ಯಾವುದೇ ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸದೇ ಮೌಖಿಕವಾಗಿ ಓಕೆ ಅನ್ನುತ್ತಾರೆ. ಶಾಲೆಯ ಮೈದಾನದ ಜಾಗವನ್ನು ಡಿಡಿಪಿಐ ಪರಮೇಶ್ವರ ರವರ ಗಮನಕ್ಕೂ ತಾರದೇ ಅದೇಗೆ ಅನಾಯಾಸವಾಗಿ ಬಿಇಓ ಟ್ಯಾಂಕ್ ನಿರ್ಮಾಣಕ್ಕೆ ನೀಡಿದ್ದಾರೆ ಎಂಬುವುದು ಕೂಡ ಯಕ್ಷಪ್ರಶ್ನೆಯಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಒಪ್ಪಿಗೆ ಮೇರೆಗೆ ಗುತ್ತಿಗೆದಾರರು ನವೆಂಬರ್ 29 ಕ್ಕೆ ಕಾಮಗಾರಿ ಪ್ರಾರಂಭಿಸಿ ಕೇವಲ 30 ದಿನಗಳಲ್ಲಿ ಕಾಮಗಾರಿ ಮುಗಿಸಿ ಮುಂದಿನ ಕಾಮಗಾರಿಯತ್ತ ಗುತ್ತಿಗೆದಾರ ಹಾಗೂ ಕಾರ್ಮಿಕರು ಗಂಟುಮೂಟೆ ಕಟ್ಟಿದ್ದಾರೆ… 90 ದಿನದ ಕಾಮಗಾರಿಯನ್ನು ಆತುರ ಆತುರದಲ್ಲಿ ಕೇವಲ ತಿಂಗಳೊಳಗೆ ಮುಗಿಸಿ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರಿ ಅನಾಹುತಕ್ಕೆ ಮೂಹೂರ್ತ ಇಟ್ಟಿದ್ದಾರೆ.

ಓಹ್ ಓಳ್ಳೆಯದೇ ಅಲ್ವಾ ಸರ್ಕಾರಿ ಕೆಲಸ,ನೀರು ಪೂರೈಸುವ ಕೆಲಸ ಇಷ್ಟು ಬೇಗವಾದರೆ ಅಂತ ನೀವಂದುಕೊಳ್ಳಬಹುದು ಆದರೆ ವಾಸ್ತವವಾಗಿ ಧೂಳಿನಂತಿರುವ ಸಿಮೆಂಟ್‌ ಕಲ್ಲಿನಂತಾಗಲು ಮುಖ್ಯ ಕಾರಣ ಅದರ ಹರಳುವಿಕೆಯ ಗುಣ.  ಅಂದರೆ, ಅದು ಹರಳಿನಂತೆ ಒಂದು ಕಣಕ್ಕೆ ಮತ್ತೂಂದು ಕಣ ಅಂಟಿಕೊಂಡು ವಜ್ರಕಾಯ ಆಗಿಬಿಡುತ್ತದೆ. ಈ ರಾಸಾಯನಿಕ ಕ್ರಿಯೆಗೆ ನೀರು ಅತ್ಯವಶ್ಯಕ. ಒಂದೇ ದಿನಕ್ಕೆ ಇಪ್ಪತ್ತು ದಿನದ ನೀರನ್ನು ಕೊಟ್ಟರೆ ಕೆಲಸ ಕೆಡುತ್ತದೆ. ಕಾಂಕ್ರಿಟಿನ ಹದ, ಸಮಯ ನೋಡಿಕೊಂಡು ಅದಕ್ಕೆ ನೀರು ಉಣಿಸಬೇಕಾಗುತ್ತದೆ. ಈ ಉಪಚಾರ, ಕಾಂಕ್ರಿಟಿಗೆ ಮೊದಲ ಸಲ ನೀರು ಸೇರಿಸಿದಾಗಿನಿಂದಲೇ ಶುರುವಾಗುತ್ತದೆ. 

ನೋಡಲು ಗಟ್ಟಿಮುಟ್ಟಾಗಿರುವ ಕಾಂಕ್ರಿಟ್‌ ಕಟ್ಟಡಗಳಲ್ಲೂ ಕೂಡ ಕೆಲವೊಮ್ಮೆ ಬಿರುಕು ಬಿಟ್ಟುಕೊಳ್ಳುವುದು, ಬಾಗುವುದು, ಸೋರುವುದು ಆಗುತ್ತದೆ. ಸಾಕಷ್ಟು ಸಿಮೆಂಟ್‌ ಸುರಿದಂತೆ ಕಾಣುತ್ತದೆ. ಮರಳ ಗುಣಮಟ್ಟದ ಬಗ್ಗೆಯೂ ಏನೂ ಕಡಿಮೆ ಮಾಡಿಲ್ಲ. ಆದರೂ ಕಾಂಕ್ರಿಟ್‌ ಸೋತದ್ದು ಎಲ್ಲಿ? ಎಂಬ ಪ್ರಶ್ನೆ ಹಲವರದ್ದಾಗಿರುತ್ತದೆ. ಇದಕ್ಕೆ ಉತ್ತರ ಕ್ಯೂರಿಂಗ್‌. ಅದು ಸರಿಯಾಗಿ ಆಗದೇ ಇದ್ದರೆ ಹೀಗೆಲ್ಲಾ ಆಗುತ್ತಿರುತ್ತದೆ.

ಟ್ಯಾಂಕ್ ಕಾಮಗಾರಿಯಲ್ಲಿ ಅರ್ಥ್ ವರ್ಕ್ ಮುಗಿಸಿ ಬೆಡ್ ಹಾಕಲಾಗುತ್ತದೆ ನಂತರದಲ್ಲಿ ಕಾಲಂ ಗಳು ಅದಕ್ಕೂ ಇಂತಿಷ್ಟೂ ದಿನ ಕ್ಯೂರಿಂಗ್ ಅವಶ್ಯಕತೆ ಇದೆ ಆ ನಂತರದಲ್ಲಿ ಸೆಂಟ್ರಿಂಗ್ ಹಾಕಿ ಸ್ಲ್ಯಾಬ್ ಹಾಕಿ ಕಡಿಮೆ ಎಂದರೂ 21 ದಿನಗಳ ಕ್ಯೂರಿಂಗ್ ಅವಶ್ಯಕತೆ ಇರುತ್ತದೆ ಆಮೇಲೆ ಕೊನೆಯ ಸ್ಲ್ಯಾಬ್ ಹೀಗೆ ಲೆಕ್ಕ ಹಾಕಿದರೆ 60 ರಿಂದ 70 ದಿನಗಳ ಕ್ಯೂರಿಂಗ್ ಅವಶ್ಯ…

ರಿಪ್ಪನ್‌ಪೇಟೆ ಪಟ್ಟಣದಲ್ಲಿ ಹಲವು ಕಡೆ ಟ್ಯಾಂಕ್ ಕಾಮಗಾರಿ ನಡೆಯುತ್ತಿದೆ ಆದರೆ ನಿರ್ದಿಷ್ಟವಾಗಿ ಈ ವಾಟರ್ ಟ್ಯಾಂಕ್ ಬಗ್ಗೆ ಇಷ್ಟು ಸವಿವರವಾಗಿ ಹೇಳುತ್ತಿದ್ದೇವೆಂದರೆ ಇಲ್ಲಿರುವ ಸರ್ಕಾರಿ ಕನ್ನಡ ಶಾಲೆ ಹಾಗೂ ಸರ್ಕಾರಿ ಉರ್ದು ಶಾಲೆಯಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಬಡವರ,ಶ್ರಮಿಕರ ಮಕ್ಕಳು..! ಈಗ ಗಟ್ಟಿಮುಟ್ಟಾಗಿ ಕಾಣುವ ಈ ವಾಟರ್ ಟ್ಯಾಂಕ್ ಒಂದೆರಡು ವರ್ಷಗಳಲ್ಲಿ ಸೋರಿಕೆಯಾಗಲು ಪ್ರಾರಂಭವಾಗಿ ಬೀಳುವ ಸಾಧ್ಯತೆಯೇ ಹೆಚ್ಚು..! ಒಂದು ವೇಳೆ ಶಾಲೆಯ ಮಕ್ಕಳು ಆಟವಾಡುವ ಸಂಧರ್ಭದಲ್ಲಿ ಬಿದ್ದು ಏನಾದರೂ ಅನಾಹುತವಾದಲ್ಲಿ ಯಾರು ಹೊಣೆಯಾಗುತ್ತಾರೆ..!?..

ಒಟ್ಟಾರೆಯಾಗಿ ಬೇಸಿಗೆ ಪ್ರಾರಂಭದ ಒಳಗೆ ಪ್ರತಿ ಮನೆಮನೆಗೂ ನೀರು ಒದಗಿಸುವ ಹಿನ್ನಲೆಯಲ್ಲಿ ಕಾಮಗಾರಿ ತ್ವರಿತವಾಗಿ ನಡೆಯುತ್ತಿರುವುದು ಸಂತೋಷದ ಸಂಗತಿ ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಗಮನಿಸುವ ಮೂಲಕ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮಾಡಳಿತ ಎಚ್ಚರಿಕೆ ವಹಿಸಬೇಕಾಗಿದೆ…

Leave a Reply

Your email address will not be published. Required fields are marked *