ರಿಪ್ಪನ್‌ಪೇಟೆ : ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ರವರ ಕಾರ್ಯವೈಖರಿ ಹಾಗೂ ಶೀಘ್ರ ಕಡತ ವಿಲೇವಾರಿಯನ್ನು ಮೆಚ್ಚಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ವಿತರಿಸಲಾಗಿದೆ.
ಶುಕ್ರವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಆರ್ ಹಿತೇಂದ್ರ IPS ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಅವರು ಪ್ರಶಂಸನಾ ಪತ್ರ ವಿತರಿಸಿದರು.
ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ರವರ ಕಾರ್ಯವೈಖರಿ,ಶೀಘ್ರ ಕಡತ ವಿಲೇವಾರಿ ಹಾಗೂ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.
ರಿಪ್ಪನ್‌ಪೇಟೆ ಠಾಣಾಧಿಕಾರಿಯಾಗಿ 2023ರ ಜೂನ್ 17 ಅಧಿಕಾರ ವಹಿಸಿಕೊಂಡ ಪಿಎಸ್‌ಐ ಪ್ರವೀಣ್ ಹಲವಾರು ಕಳ್ಳತನ ಪ್ರಕರಣ ಭೇಧಿಸಿ , ಜನಸ್ನೇಹಿ ಪೊಲೀಸ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಾಗರೀಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಗರ್ತಿಕೆರೆಯಲ್ಲಿ ಮನೆ ಕಳ್ಳತನ ನಡೆಸಿದ್ದ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಠಾಣೆಯಲ್ಲಿಯೇ ರಕ್ತದಾನ ಶಿಬಿರ ನಡೆಸುವ ಮೂಲಕ ರಕ್ತದಾನದ ಮಹತ್ವ ಸಾರ್ವಜನಿಕರಿಗೆ ಮನದಟ್ಟು ಮಾಡುವ ಕೆಲಸಕ್ಕೆ ಮುಂದಾಗಿದ್ದರು.
ಜುಲೈ16 ರಂದು ರಿಪ್ಪನ್‌ಪೇಟೆ ಸಮೀಪದ ಗವಟೂರಿನಲ್ಲಿ 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ಕುಟುಂಬದ ನೋವಿಗೆ ಪ್ರವೀಣ್ ಹಾಗೂ ಸಿಬ್ಬಂದಿಗಳು ಹೆಗಲು ಕೊಡುವ ಮೂಲಕ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದರು.
ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ಮೇಲೆ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತ್ರತ್ವದಲ್ಲಿ ದಾಳಿಯ ಪ್ರವೀಣ್ ಎಸ್ ಪಿ ಪಾಲ್ಗೊಂಡು ವಿದೇಶಿ ಮದ್ಯ, ಬಂದೂಕು, ಪ್ರಾಣಿ ಕೊಂಬಿನ ಟ್ರೋಫಿ ವಶಕ್ಕೆ ಪಡೆದಿದ್ದರು.ಇದು ದಾಳಿ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು.
ನವೆಂಬರ್ 1 ರಂದು ರಿಪ್ಪನ್‌ಪೇಟೆ ಪಟ್ಟಣದ ಗವಟೂರು ಗ್ರಾಮದ ಖಾಸಗಿ ಕಟ್ಟಡದ ಹಿಂಭಾಗದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.
ನವೆಂಬರ್ 10 ರಂದು ರಿಪ್ಪನ್‌ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯ ಖಾಸಗಿ ಶ್ರೀನಂದಿ ಆಸ್ಪತ್ರೆಯ ಎದುರಿನಲ್ಲಿ ಹೆತ್ತಮಕ್ಕಳಿಗೆ ಬೀಕ್ಷಾಟನೆ ಮಾಡುವಂತೆ ಮಕ್ಕಳ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತೆ ತಾಯಿಯೇ ಮಕ್ಕಳನ್ನು ಬಿಕ್ಷಾಟನೆಗೆ ಬಳಸುತಿದ್ದ ತಾಯಿಗೆ ವಾರ್ನಿಂಗ್ ಕೊಟ್ಟು ಕಳಿಸಿದ ಘಟನೆ ಸಾರ್ವಜನಿಕರ ಗಮನ ಸೆಳೆದಿತ್ತು.ನ.27 ರಂದು ಮಲೆನಾಡಿನ ರೈತರಿಗೆ ಕಂಟಕಪ್ರಾಯವಾಗಿದ್ದ ಮನೆಯಲ್ಲಿ ಒಣಗಿಸಿಡುತಿದ್ದ ಅಡಿಕೆ,ರಬ್ಬರ್ ಕಳ್ಳತನ ಮಾಡುತಿದ್ದ ಕಳ್ಳರ ಜಾಲವೊಂದನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಮಾಲು ಹಾಗೂ ವಾಹನ ಸಮೇತ ಬಂಧಿಸುವ ಮೂಲಕ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ತಂಡ ಜಿಲ್ಲೆಯ ಗಮನ ಸೆಳೆದಿತ್ತು.
ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಮೂಡಿಸುವ ,ಅಪರಾಧ ತಡೆಗೆ ಜಾಗೃತಿ ಕಾರ್ಯಗಾರ ನಡೆಸುವ ಮೂಲಕ ರಿಪ್ಪನ್‌ಪೇಟೆ ಪಟ್ಟಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪಿಎಸ್‌ಐ ಪ್ರವೀಣ್ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಒಂದು ಉತ್ತಮ ತಂಡ ಎಂತಹ ಕಾರ್ಯವನ್ನು ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ….
ಒಟ್ಟಾರೆಯಾಗಿ ಮಲೆನಾಡ ಭಾಗಗಳಲ್ಲಿ ಯಾವುದಾದರೂ ಕಳ್ಳತನ ಪ್ರಕರಣ ನಡೆದರೆ ಅದನ್ನೂ ಭೇಧಿಸುವುದು ಕಷ್ಟಕರವಾಗಿತ್ತು ಆದರೆ ಪ್ರಸ್ತುತ ಅದಕ್ಕೆ ತದ್ವಿರುದ್ಧವಾಗಿ ಕಳ್ಳರೇ ಈ ಭಾಗಕ್ಕೆ ಕಳ್ಳತನಕ್ಕೆ ಬರಲು ಹಿಂಜರಿಯುವಂತಹ ಪೊಲೀಸ್ ಸಿಬ್ಬಂದಿಗಳ ತಂಡವಿದೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ.