ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 500 ಕ್ಕೂ ಅಧಿಕ ಕೆಪಿಎಸ್ ಶಾಲೆ ತೆರೆಯಲು ಚಿಂತನೆ – ಮಧು ಬಂಗಾರಪ್ಪ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ನಡ ಪಠ್ಯದೊಂದಿಗೆ ಇಂಗ್ಲಿಷ್ ಬೋಧನೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಗೆ ಪ್ರಗತಿಗೆ ಕಾರಣವಾಗುವುದೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ “ಕರ್ನಾಟಕ ಪಬ್ಲಿಕ್ ಸ್ಕೂಲ್’’ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಎಲ್.ಕೆ.ಜಿ. ಯು.ಕೆ.ಜಿ.ಯಿಂದ ಪಿ.ಯು.ಸಿ.ವರಗೆ ಒಂದೇ ಸೂರಿನಡಿ ಮಗು 14 ವರ್ಷ ಕಾಲ ಕರ್ನಾಟಕ ಪಬ್ಲಿಕ್ ಸ್ಕೂಲ್ ವ್ಯಾಸಂಗ ಮಾಡಲು ಸಹಕಾರಿಯಾಗಿದೆ.
ಶಿಕ್ಷಣ ಇಲಾಖೆಯ ಈ ಹಿಂದಿನ ಸರ್ಕಾರಗಳ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಈ ಕಾರ್ಯವನ್ನು ಪ್ರಶಂಸಿಸಿ ಕೆಲವು ಮಾರ್ಪಡುಗಳೊಂದಿಗೆ ಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ 500 ಕ್ಕೂ ಅಧಿಕ ಕಡೆಯಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದೆಂದು ಸಚಿವರು ಘೋಷಿಸಿದರು.
ಈಗಾಗಲೇ ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಲಾಗಿ ಕಾನೂನಿನ ತೊಡಕಿನಿಂದಾಗಿ ವಿಳಂಬವಾಗಿದೆ ಇನ್ನೂ ಒಂದು ಎರಡು ತಿಂಗಳಲ್ಲಿ ಸಮಸ್ಯೆ ನಿವಾರಣೆಗೊಳಿಸಿ ನೇಮಕಾತಿಗೊಂಡಿರುವ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದು ಎಂದ ಅವರು, ಇನ್ನೂ 43 ಸಾವಿರ ಶಿಕ್ಷಕರನ್ನು ಖಾಯಂಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದು ಹೇಳಿದರು.
ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಮಾಡುವುದೇ ನಮ್ಮ ಸರ್ಕಾರದ ಮೂಲ ಗುರಿಯಾಗಿದ್ದು 2500 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿನ ಪ್ರತಿ 2 ಗ್ರಾಮ ಪಂಚಾಯ್ತಿಗೆ ಒಂದರಂತೆ 3 ಸಾವಿರ ಶಾಲೆಗಳನ್ನು ಉನ್ನತೀಕರಿಸುವುದರೊಂದಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಲಾಗುವುದೆಂದು ವಿವರಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ನವೆಂಬರ್ ತಿಂಗಳಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯುತ್ ಮತ್ತಿ ನೀರಿನ ಬಿಲ್ ಸಂದಾಯ ಮಾಡದಂತೆ ಸರ್ಕಾರವೇ ಭರಿಸುವುದಾಗಿ ಘೋಷಿಸಲಾಗಿದ್ದು ಇದರಿಂದಾಗಿ ರಾಜ್ಯದಲ್ಲಿನ ಹಲವು ಶಾಲೆಗಳಲ್ಲಿ ದೂಳು ಹಿಡಿಯವಂತಾಗಿರುವ ಗಣಕ ಯಂತ್ರಗಳು ಪುನಃ ಕಾರ್ಯಾರಂಭ ಮಾಡಿವೆ. ಇದರಿಂದಾಗಿ ಮಕ್ಕಳ ಪಠ್ಯಕಲಿಕೆಯೊಂದಿಗೆ ಕಂಪ್ಯೂಟರ್ ಜ್ಞಾನ ವೃದ್ಧಿಯಾಗುವುದೆಂದ ಅವರು ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಹಾಲು ನೀಡುವುದರೊಂದಿಗೆ ಮಕ್ಕಳ ಪೌಷ್ಟಿಕಾಂಶದ ಕೊರತೆಯನ್ನು ದೂರ ಮಾಡಲಾಗುತ್ತಿದ್ದು ಈ ತಿಂಗಳ ಅಂತ್ಯದೊಳಗೆ ರಾಗಿ ಮಾಲ್ಟ್ ಸಹ ನೀಡಲಾಗುವುದು ಇದರಿಂದ ರಾಜ್ಯದ 60 ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದ್ದು ಕೇಂದ್ರ ಸರ್ಕಾರದ ಆಹಾರ ಇಲಾಖೆಯ ಅನುಮತಿಗಾಗಿ ಯೋಜನೆ ಅನುಷ್ಟಾನ ವಿಳಂಬವಾಗಿದೆ ಎಂದರು.
ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಕ್ಕಳನ್ನು ಶಾಲೆಗೆ ದಾಖಲಿಸದೇ ಇರುವ ಪೊಷಕ ವರ್ಗದವರ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವ ಕಾನೂನು ಜಾರಿಯಾಗಬೇಕು ಎಂದು ಹೇಳಿ, ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಸರ್ಕಾರ ಮಾಡಿದೆ ಇದರೊಂದಿಗೆ ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಉಚಿತ ಶಿಕ್ಷಣ ಪಠ್ಯಪುಸ್ತಕ ಮೇರಿಟ್ ಮೂಲಕ ನುರಿತ ಶಿಕ್ಷಕರುಗಳು ಆಯ್ಕೆಯಾಗಿ ಬಂದರು ಕೂಡಾ ನಮ್ಮ ಪೋಷಕರು ಖಾಸಗಿ ವ್ಯಾಮೋಹಕ್ಕೆ ಜೋತು ಬಿದ್ದಿದ್ದಾರೆಂದು ವಿಷಾದ ವ್ಯಕ್ತಪಡಿಸಿ, ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ದಾಖಲಿಸಲು ಮನವಿ ಮಾಡಿದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳು ವ್ಯಕ್ತಿ ನಿರ್ಮಾಣದ ಕೇಂದ್ರಗಳು. ನೈತಿಕ ಶಿಕ್ಷಣದೊಂದಿಗೆ ವಿದಾರ್ಥಿಗಳ ಬದುಕಿನೊಂದಿಗೆ ಸಾಮಾಜಿಕ ರಾಷ್ಟ್ರೀಯತೆ ಮನೋಭಾವನೆ ಬೆಳಸುವಂತಾಗಿ ಮಗುವಿನ ಮಾನಸಿಕ ವಿಕಸನಕ್ಕೆ ಕಾರಣವಾಗಲಿ ಎಂದರು.
ಕಾರ್ಯಕ್ರಮಕ್ಕೆ ಪತ್ರಕರ್ತರಿಗಿಲ್ಲ ಆಹ್ವಾನ – ಗರಂ ಆದ ಶಿಕ್ಷಣ ಸಚಿವ
ಇತ್ತೀಚಿಗೆ ಗರ್ತಿಕೆರೆಯ ಕೆಪಿಎಸ್ ಶಿಕ್ಷಕನೋರ್ವ ಮೊಟ್ಟೆ ತಿನ್ನಿಸಿದ ಪ್ರಕರಣವನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸುದ್ದಿವಾಹಿನಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಹಿನ್ನಲೆಯಲ್ಲಿ ಕೆಪಿಎಸ್ ಸಿ ಆಡಳಿತ ಮಂಡಳಿಯವರು ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ನಿರ್ಲಕ್ಷಿಸಿ ಆಹ್ವಾನ ಪತ್ರಿಕೆ ನೀಡಿರಲಿಲ್ಲ ಈ ಹಿನ್ನಲ್ರ್ ರಿಪ್ಪನ್‌ಪೇಟೆ ಮಾದ್ಯಮದ ತಂಡ ಶಿಕ್ಷಣ ಮಧುಬಂಗಾರಪ್ಪ ಗಮನಕ್ಕೆ ತಂದಾಗ ಗರಂ ಆದ ಮಧುಬಂಗಾರಪ್ಪ ತಮ್ಮ ಆಪ್ತ ಸಹಾಯಕನನ್ನು ಕರೆದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್‌ರಿಗೆ ನೋಟಿಸ್ ನೀಡುವಂತೆ ಸೂಚಿಸಿ ನಾನು ಕರೆಯುತಿದ್ದೇನೆ ಬನ್ನಿ ಎಂದು ಸಚಿವ ಮಧು ಬಂಗಾರಪ್ಪ ಪತ್ರಕರ್ತರನ್ನು ನೂತನ ಶಾಲಾ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಿದರು.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸದಸ್ಯ ಬಂಡಿ ರಾಮಚಂದ್ರ,ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಶ್ವನಾಥ ಗಂದ್ರಳ್ಳಿ, ಉಪಾಧ್ಯಕ್ಷೆ ವಿನೋಧ, ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುಳಾ, ಲಿಂಗರಾಜ್, ಸುರೇಶ್, ದೇವರಾಜ್, ಸುವರ್ಣ, ಕುಸುಮ, ಮಮತ, ಎಇಡಿಸಿ ಉಪಾಧ್ಯಕ್ಷ ಟಿ.ಡಿ.ಸೋಮಶೇಖರ, ನಾಗೇಶ್ ಉಂಬ್ಳೆಬೈಲು, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ತಹಶೀಲ್ದಾರ್ ರಶ್ಮಿ, ಪ್ರಾಚಾರ್ಯ ಮಹಮದ್‌ನಜ್ವತ್ ಉಲ್ಲಾ, ಸತ್ಯನಾರಾಯಣ, ಪ್ರಭಾವತಿ ಹೆಗಡೆ, ಶ್ರೀದೇವಿ ಇನ್ನಿತರರು ಹಾಜರಿದ್ದರು.
ನಿತೀಶ ಸಂಗಡಿಗರು ಪ್ರಾರ್ಥಿಸಿದರು. ಬಿಇಓ ಹೆಚ್.ಆರ್.ಕೃಷ್ಣಮೂರ್ತಿ ಸ್ವಾಗತಿಸಿದರು.