ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ನಿಧನ
ಸಾಗರ | ಹಿರಿಯ ಸಾಹಿತಿ ನಾ.ಡಿಸೋಜ ಅವರ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾ.ಡಿಸೋಜ ಅವರ ಪುತ್ರ ನವೀನ್ ಡಿಸೋಜ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಂದೆಯ ನಿಧನದ ಸುದ್ದಿಯನ್ನು ಪ್ರಕಟಿಸಿದ್ದಾರೆ.
ಮಂಗಳೂರಿನಿಂದ ನಾಳೆ ಮೂರುಗಂಟೆಗೆ ಸಾಗರಕ್ಕೆ ನಾ ಡಿಸೋಜ ಅವರ ಪಾರ್ಥೀವ ಶರೀರ ತಲುಪಲಿದೆ. ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜನವರಿ.7ರಂದು ಮೃತ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಸಾಗರದಲ್ಲಿ ನೆರವೇರಿಸುವುದಾಗಿ ತಿಳಿಸಿದ್ದಾರೆ.
ಮೃತ ನಾ.ಡಿಸೋಜ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.
ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.
ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯಗೊಂಡಿವೆ. ನಾ. ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಮೇಲೆಯೂ ಮೂಡಿನಿಂತು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.
ಅಜ್ಞಾತ, ಒಂದು ಜಲಪಾತದ ಸುತ್ತ , ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ.ಡಿಸೋಜ ಅವರು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗುಲ್ವಾಡಿ ವೆಂಕಟರಾವ ಪ್ರಶಸ್ತಿ ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಮಾಸ್ತಿ ಪ್ರಶಸ್ತಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನವದೆಹಲಿ ಕಳಾ ಪ್ರಶಸ್ತಿ ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಶ್ರೀಯುತರು ಭಾಜನರಾಗಿದ್ದರು.
ಮಲೆನಾಡಿನ ಹೆಸರಾಂತ ಸಾಹಿತಿ ನಿಧನಕ್ಕೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ಸಂತಾಪ ಸೂಚಿಸುತ್ತದೆ.