ರಿಪ್ಪನ್‌ಪೇಟೆ : 2025-26ನೇ ಸಾಲಿನ ಎನ್.ಆರ್.ಈ.ಜಿ ಯೋಜನೆಯಡಿ ಇಂದು ಗ್ರಾಮ ಪಂಚಾಯ್ತಿ ಗ್ರಾಮ ಕ್ರಿಯಾ ಯೋಜನೆಯನ್ನು ತಯಾರಿಸುವ ವಿಶೇಷ ಗ್ರಾಮ ಸಭೆಯು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯ ನೋಡಲ್ ಆಧಿಕಾರಿಯಾಗಿ ಹೊಸನಗರ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ಭಾಗವಹಿಸಿ ಸರ್ಕಾರದ ಯೋಜನೆಯ ಕುರಿತು ನಾಗರೀಕರಿಗೆ ಜಾಗೃತಿ ಮೂಡಿಸಿ ಸೌಲಭ್ಯದ ಸದ್ಬಳಕೆಗೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ವಸತಿ ಗೃಹಕ್ಕೆ ರಸ್ತೆ ನಿರ್ಮಾಣ ಮಾಡುವ ವಿಚಾರದಲ್ಲಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಸಭೆಯ ಗಮನಸೆಳೆಯುತಿದ್ದಂತೆ NREG ಯೋಜನೆಯಡಿಯಲ್ಲಿ ಈ ರಸ್ತೆ ಕಾಮಗಾರಿ ನಡೆಸಲು ಸಾಮಾಗ್ರಿಗಳ ಅನುಪಾತದ ಕೊರತೆಯಾಗುವುದು ಎಂದು ನೋಡಲ್ ಅಧಿಕಾರಿ ಹೇಳುತಿದ್ದಂತೆ ಟಿ ಆರ್ ಕೃಷ್ಣಪ್ಪ ಸಭೆಯ ಆಶಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಆಸೀಫ಼್ ಭಾಷಾ ಮಧ್ಯ ಪ್ರವೇಶಿಸಿ ಉದ್ಯೋಗ ಖಾತರಿ ಅಡಿಯಲ್ಲಿ ಪೊಲೀಸ್ ವಸತಿಗೃಹದ ರಸ್ತೆ ನಿರ್ಮಿಸಲು ಸಾಧ್ಯವಾಗುದಿಲ್ಲ ಆದ್ದರಿಂದ ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಅನುದಾನ ಕೊಡಿಸುವ ಭರವಸೆ ನೀಡಿದರು.
ಎಲ್ಲಾ ಗ್ರಾಮ ಸಭೆಗಳಲ್ಲೂ ಗೈರಾಗುವ ಸಾಮಾಜಿಕ ಅರಣ್ಯ ಇಲಾಖೆಯವರು ಇಂದಿನ ಗ್ರಾಮ ಸಭೆಗೆ ಗೈರು ಹಾಜರಾಗುವ ಮೂಲಕ ಕರ್ತವ್ಯ ಲೋಪವೆಸಗುತಿದ್ದು ಈ ಬಗ್ಗೆ ಆವರಿಗೆ ನೋಟಿಸ್ ನೀಡುವಂತೆ ಸಭೆ ಒಕ್ಕೊರಲ ನಿರ್ಧಾರ ಮಾಡಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಆಸಿಫ್, ಗಣಪತಿ, ಪ್ರಕಾಶ ಪಾಲೇಕರ್, ಎನ್.ಚಂದ್ರೇಶ್, ಆರ್.ವಿ.ನಿರೂಪ್, ವೇದಾವತಿ, ಸಾರಾಭಿ, ಅನುಪಮಾ ರಾಕೇಶ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ್, ಕೃಷಿ ಇಲಾಖೆಯ ಮತ್ತು ಕಿರಿಯ ಅಭಿಯಂತರರು ಹಾಜರಿದ್ದರು.
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ನಾಗರಾಜ್ ಸ್ವಾಗತಿಸಿದರು. ಲಕ್ಷ್ಮಿ ನಾಗರಾಜ್ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಪ್ಪುಪಟ್ಟಿ ಕಟ್ಟಿ ಧರಿಸಿ ಸಭೆಗೆ ಹಾಜರಾದ ಬಿಜೆಪಿ ಬೆಂಬಲಿತ ಸದಸ್ಯರು
ಉದ್ಯೋಗ ಖಾತ್ರಿ ಕ್ರಿಯಾ ಯೋಜನೆಯ 2025-26ನೇ ಸಾಲಿನ ವಿಶೇಷ ಗ್ರಾಮಸಭೆಗೆ ಹಾಜರಾಗುವಾಗ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಮಂಜುಳ, ವನಮಾಲ, ಪಿ.ರಮೇಶ್, ದಾನಮ್ಮ ಕಪ್ಪುಪಟ್ಟಿ ಕೈಗೆ ಕಟ್ಟಿಕೊಂಡು ಸಭೆಗೆ ಹಾಜರಾದರು.
ಈ ಬಗ್ಗೆ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಈಗಾಗಲೇ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ವಿರುದ್ದ ಹಲವಾರು ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ಹಿಂದಿನ ಸಾಮಾನ್ಯ ಸಭೆ ಬಹಿಷ್ಕರಿಸಿದ್ದೇವು ಆದರೆ ಗ್ರಾಮದ ಅಭಿವೃದ್ದಿಗೆ ತೊಡಕಾಗಬಾರದು ಎನ್ನುವ ಹಿನ್ನಲೆಯಲ್ಲಿ ಇಂದಿನ ಕ್ರೀಯಾ ಯೋಜನೆಯ ಗ್ರಾಮಸಭೆಗೆ ಕಪ್ಪು ಪಟ್ಟಿ ಧರಿಸಿ ಹಾಜರಾಗಿದ್ದೇವೆ ಎಂದರು.
ಸಾಗರ ಮತ್ತು ಹೊಸನಗರ ತಾಲೂಕಿಗೆ ನಾನು ಒಬ್ಬನೇ ಸಹಾಯಕ ತಾಂತ್ರಿಕ ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅನೇಕ ಕಾರ್ಯದ ಒತ್ತಡದಲ್ಲಿ ಗ್ರಾಮಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ರೋಹಿತ್
ಸಹಾಯಕ ತಾಂತ್ರಿಕ ಅಭಿಯಂತರರು
ಸಾಮಾಜಿಕ ಅರಣ್ಯ ಇಲಾಖೆ