ರಿಪ್ಪನ್‌ಪೇಟೆ | ಅಸಾಧರಣ ಧೈರ್ಯ ಪ್ರದರ್ಶಿಸಿದ್ದ ಬಾಳೂರು ಶಾಲೆಯ ಮಣಿಕಂಠನಿಗೆ ರಾಜ್ಯ ಸರ್ಕಾರದ ಶೌರ್ಯ ಪ್ರಶಸ್ತಿ ಪ್ರಕಟ
ರಿಪ್ಪನ್‌ಪೇಟೆ : ಸಹಪಾಠಿಯ ಶಾಲಾ ಬ್ಯಾಗ್ ನಲ್ಲಿದ್ದ ನಾಗರ ಹಾವನ್ನು ಗಮನಿಸಿ ತಕ್ಷಣವೇ ಸಮಯಪ್ರಜ್ಞೆ ಮತ್ತು ಚಾಣಾಕ್ಷತನದಿಂದ ಬ್ಯಾಗ್ ಜಿಪ್ ಮುಚ್ಚಿ ಬ್ಯಾಗನ್ನು ಶಾಲಾ ಆವರಣಕ್ಕೆ ಕೊಂಡೊಯ್ದು ಅಸಾಧಾರಣ ಧೈರ್ಯ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಬಾಳೂರು ಶಾಲೆಯ ವಿದ್ಯಾರ್ಥಿ ಆರ್ ಮಣಿಕಂಠ ಭಾಜನರಾಗಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಮಕ್ಕಳಿಗೆ ಪ್ರತಿವರ್ಷ ಮಕ್ಕಳ ದಿನಾಚರಣೆ ನಿಮಿತ್ತ ನೀಡಲಾಗುವ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆರ್ ಮಣಿಕಂಠ ಆಯ್ಕೆಯಾಗಿದ್ದು ದಿನಾಂಕ: 29-11-2024 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾನೆ.
ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಯನ್ನು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ, ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಳಗೊಂಡಂತೆ ಎಲ್ಲಾ ಅಧಿಕಾರಿ ವೃಂದದವರು, ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಸಮಸ್ತ ಗ್ರಾಮಸ್ಥರು ಅಭಿನಂದಿಸಿರುತ್ತಾರೆ.
ಅಂದು ನಡೆದಿದ್ದೇನು..!!?
ದಿನಾಂಕ 01 – 09 -2023 ರಂದು ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗಿನಲ್ಲಿ ಸದ್ದಿಲ್ಲದೆ ಮಲಗಿದ್ದ ನಾಗರಹಾವನ್ನು ಮಣಿಕಂಠ ಧೈರ್ಯದಿಂದ ಎದುರಿಸಿ ಮುಂದಾಗುವ ಭಾರಿ ಅನಾಹುತವನ್ನು ತಪ್ಪಿಸಿದ್ದನ್ನು
ಅಂದು ಶುಕ್ರವಾರ ಬೆಳಗ್ಗೆ ಶಾಲೆಯ ಬೆಲ್ಲು ಹೊಡೆದು ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕ ಪಾಠ ಓದಲು ಪುಸ್ತಕ ಬ್ಯಾಗಿನಿಂದ ಹೊರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ಹಾಜರಾತಿ ಕರೆಯುತ್ತಿದ್ದರು.ವಿದ್ಯಾರ್ಥಿ ಭುವನ್ ಶಿಕ್ಷಕರ ಅಣತಿಯಂತೆ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗಿನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ. ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್ ಮಣಿಕಂಠ ಅವನಿಗೆ ಬ್ಯಾಗನಲ್ಲಿ ಇರುವ ಹಾವನ್ನು ತೋರಿಸಿದ್ದಾನೆ.ಹಾವನ್ನು ಕಂಡ ತಕ್ಷಣವೇ ಮಣಿಕಂಠಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ. ನಂತರ ಬ್ಯಾಗು ಸಮೇತ ಶಿಕ್ಷಕರ ಬಳಿ ಬಂದು ಇದರಲ್ಲಿ ಹಾವು ಇದೆ ಎಂದು ತಿಳಿಸಿದ್ದಾನೆ.
ವಿದ್ಯಾರ್ಥಿಯ ಮಾತಿಗೆ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೆ ಸುರುಳಿ ಸುತ್ತಿಕೊಂಡು ಬೇಟೆಗಾಗಿ ಕಾದು ಕುಳಿತ ನಾಗರ ಹಾವನ್ನು ಕಂಡು ಬೆಚ್ಚಿ ಬೀಳುವ ಸರದಿ ಶಿಕ್ಷಕರದಾಗಿತ್ತು.
ಶಾಲೆಯ ಕೂಗಳತೆ ದೂರದಲ್ಲಿದ್ದ ವಿದ್ಯಾರ್ಥಿ ಭುವನ್ ಮನೆಯಿಂದ ಪೋಷಕರನ್ನು ಕರೆಯಿಸಿದ ಶಿಕ್ಷಕರು, ಘಟನೆಯ ನೈಜ್ಯತೆ ಹಾಗೂ ಸಹಪಾಠಿ ಮಣಿಕಂಠನ ಸಮಯ ಪ್ರಜ್ಞೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ನಂತರ ಪೋಷಕರ ಸಮ್ಮುಖದಲ್ಲಿ ಬ್ಯಾಗಿನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ವೃಂದ ಜೊತೆಗೂಡಿ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದರು.