ಶಿವಮೊಗ್ಗ: ಸಹಕಾರ ಕ್ಷೇತ್ರದಲ್ಲಿ ನಾಗೇಶ್ ಡೋಂಗ್ರೆ ಎಂಬ ಭ್ರಷ್ಟ ಅಧಿಕಾರಿ ಸೇರಿಕೊಂಡಿದ್ದು, ಈತನನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗೇಶ್ ಡೋಂಗ್ರೆ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾನೆ. ಡಿಸಿಸಿ ಬ್ಯಾಂಕ್ ನ ನಿರ್ದೇಶಕರನ್ನು ವಜಾ ಮಾಡಲು ಹೊರಟಿದ್ದಾನೆ. ಹಾಲು ಒಕ್ಕೂಟದ ಚುನಾವಣೆಯಲ್ಲಿ ಮಾಡಲೇ ಇಲ್ಲ. ಈ ಹಿಂದೆ ಈತನ ಮೇಲೆ ಭ್ರಷ್ಟಾಚಾರದ ಆರೋಪ ಕೂಡ ಇದೆ. ಮುಂಬಡ್ತಿ ಸಿಕ್ಕಿದ್ದರೂ ಕೂಡ ಅಲ್ಲಿಗೆ ಹೋಗದೇ ಇದೇ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾನೆ ಎಂದು ಆರೋಪಿಸಿದರು.ಈ ಅಧಿಕಾರಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ಮುಖಂಡರ ಆಶ್ರಯವಿದೆ. ಅವರು ಹೇಳಿದ್ದನ್ನು ಕೇಳುವುದಷ್ಟೇ ಈತನ ಕೆಲಸವಾಗಿದೆ. ಡೋಂಗ್ರೆ ಇಷ್ಟೆಲ್ಲಾ ಮಾಡಲು ಪ್ರಮುಖ ಕಾರಣವೆಂದರೆ ವಿಧಾನ ಪರಿಷತ್ ಚುನಾವಣೆ. ಸಹಕಾರ ಕ್ಷೇತ್ರದಲ್ಲಿ ಸುಮಾರು 350 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅವರನ್ನೆಲ್ಲಾ ಹೆದರಿಸಿ ಬಿಜೆಪಿಗೆ ಮತ ಹಾಕುವಂತೆ ಪ್ರೇರೆಪಿಸುವುದು ಮತ್ತು ಬಿಜೆಪಿ ಪರ ಇಲ್ಲದಿದ್ದರೆ ನೋಟಿಸ್ ನೀಡುವುದು ಈತನ ಕೆಲಸವಾಗಿದೆ.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬರಬಾರದು ಎಂಬುದು ಬಹಳ ಮುಖ್ಯವಾದ ಉದ್ದೇಶ. ಆದರೆ, ಸಂಸದರ ಚೇಲನಾಗಿರುವ ಈತ ಮಾತ್ರ ಸಹಕಾರ ಕ್ಷೇತ್ರವನ್ನು ರಾಜಕೀಯಗೊಳಿಸುತ್ತಿದ್ದಾನೆ ಎಂದು ಆರೋಪಿಸಿದರು.ಚುನಾವಣಾಧಿಕಾರಿಗಳು ಈ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು. ಮತ್ತು ಭ್ರಷ್ಟಾಚರದ ಬಗ್ಗೆ ತನಿಖೆ ನಡೆಸಬೇಕು. ಚುನಾವಣೆ ಮುಗಿಯವತನಕ ಚುನಾವಣಾ ಪ್ರಕ್ರಿಯೆಯಿಂದ ದೂರವಿಡಬೇಕು. ಇಲ್ಲದಿದ್ದರೆ ಈತನ ವಿರುದ್ಧ ಅವರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.
ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ. ಒಂದು ರೀತಿಯಲ್ಲಿ ಸರ್ಕಾರವೇ ಸತ್ತು ಹೋಗಿದೆ. ರೈತರ ಬದುಕು ದುಸ್ತರವಾಗಿದೆ. ಸಂಸದರು, ಸಚಿವರು ಸೇರಿದಂತೆ ಅಭಿವೃದ್ಧಿಯನ್ನು ಮರೆತು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರೈತರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಅಡಿಕೆ, ಭತ್ತ, ಜೋಳ, ರಾಗಿ ಎಲ್ಲವೂ ಮಳೆಯಿಂದ ನಾಶವಾಗಿವೆ. ಆದರೂ, ಶಾಸಕರಾಗಲೀ, ಸಂಸದರಾಗಲೀ, ಅಧಿಕಾರಿಗಳಾಗಲೀ ಚೆಕಾರ ಎತ್ತುತ್ತಿಲ್ಲ. ರೈತರ ಶಾಪ ಇವರನ್ನು ತಟ್ಟದೇ ಬಿಡದು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಏನು ಹೇಳುವುದು? ಅಧಿಕಾರ ಕಳೆದುಕೊಂಡ ಅವರ ಬಗ್ಗೆ ಅಂತಃಕರಣವಿದೆ ಅಷ್ಟೇ. ಆದರೆ, ಸಚಿವ ಕೆ.ಎಸ್. ಈಶ್ವರಪ್ಪನವರು ಪಕ್ಷದ ಹಿರಿಯರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರನ್ನು ಟೀಕೆ ಮಾಡುವುದರಲ್ಲಿ ಯಾವ ಖುಷಿ ಸಿಗುತ್ತೋ ಗೊತ್ತಿಲ್ಲ. ಆದರೂ ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದರು.ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮೂರು ಮೂರು ಮುಖ್ಯಮಂತ್ರಿಗಳು ಬದಲಾಗತ್ತಾ ಇರುತ್ತಾರೆ. ಬಿಜೆಪಿಯ ಅಜೆಂಡವೇ ಇದಾಗಿದೆ. ಈ ಎರಡನೇ ಅವಧಿಗೂ ಕೂಡ ಯಡಿಯೂರಪ್ಪ ಆದರು, ಬಸವರಾಜ ಬೊಮ್ಮಾಯಿ ಆದರು. ಈಗ ಆ ಪಕ್ಷದ ಮುಖಂಡರೇ ಹೇಳುವಂತೆ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್, ಬಿ.ಆರ್. ನಾಗರಾಜ್, ನವಿಲೇಶಪ್ಪ, ಬಸವನಗೌಡ್ರು ಉಪಸ್ಥಿತರಿದ್ದರು.