ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷರನ್ನು ಸ್ಥಾನದಿಂದ ವಜಾ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಿ.ಎನ್.ಅಕ್ಮಲ್ ಜಾಮಿಯಾ ಮಸೀದಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡವರು. ಅಕ್ಮಲ್ ಅವರು ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಕೂಡ. ಇತ್ತೀಚೆಗೆ ನಗರದ ರಾಮನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಅನ್ನದಾನ ಏರ್ಪಡಿಸಿದ್ದರು. ಈ ವೇಳೆ ಅಕ್ಮಲ್ ಅವರು ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿ ಪೂಜೆ ಬಳಿಕ ಮಂಗಳಾರತಿ ಪಡೆದಿದ್ದರು. ಈ ಕಾರಣಕ್ಕೆ ಅವರನ್ನು ಜಾಮೀಯ ಮಸೀದಿ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದೆ.
ಈ ಕುರಿತು ಮಾತನಾಡಿದ ಅಕ್ಮಲ್, ನನ್ನ ವಿರುದ್ಧ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಮೊದಲು ನನ್ನನ್ನು ಸಭೆಗೆ ಕರೆಯಬೇಕು. ಚರ್ಚೆ ನಡೆಸಬೇಕು, ನೋಟಿಸ್ ನೀಡಬೇಕು. ಯಾವುದೂ ಇಲ್ಲದೆ ಆಂಜನೇಯನ ಆಶೀರ್ವಾದ ಪಡೆದಿದ್ದಕ್ಕೆ ಪದಚ್ಯುತಿ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಸಂಘದಲ್ಲಿ ಒಳಗೊಳಗೆ ಮಾತನಾಡಿಕೊಂಡು ನನ್ನ ಗಮನಕ್ಕೂ ತಾರದೇ ಏಕಾಏಕಿ ಪದಚ್ಯುತಿಗೊಳಿಸಿದ್ದಾರೆ ಎಂದು ಆರೋಪಿಸಿದರು.
ಬೈಲಾದಲ್ಲೇ ಸರ್ವಧರ್ಮ ಒಂದೇ ಎಂದು ಇದೆ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದು, ಏನು ತಪ್ಪು ಎಂದು ಅಕ್ಮಲ್ ಮತ್ತು ಬೆಂಬಲಿಗರು ಜಾಮೀಯ ಮಸೀದಿಗೆ ನ್ಯಾಯ ಕೇಳಲು ಹೋಗಿದ್ದಾರೆ. ಆಗ ಮಸೀದಿಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ವೇಳೆ ಅಕ್ಮಲ್ ಹಾಗೂ ಆತನ ಬೆಂಬಲಿಗರು ಮಸೀದಿಯ ಧರ್ಮಗುರುವಿನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅಕ್ಮಲ್ ಸೇರಿ ನಾಲ್ವರ ವಿರುದ್ಧ ಮಸೀದಿಯ ಧರ್ಮಗುರುಗಳು ದೂರು ನೀಡಿದ್ದಾರೆ.
ಧರ್ಮಗುರುಗಳ ದೂರಿನ ಅನ್ವಯ ನಗರದ ಬಸವನಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ನ್ಯಾಯ ಕೇಳಲು ಹೋದ ಅಕ್ಮಲ್ ವಿರುದ್ಧವೇ 307 ಕಲಂನಡಿ ಕೇಸ್ ದಾಖಲಾಗಿದೆ.
ಅಕ್ಮಲ್ ಅವರು ಸಮಾಜ ಸೇವಕ, ಕಷ್ಟ ಎಂದು ಮನೆಬಾಗಿಲಿಗೆ ಯಾರೇ ಹೋದ್ರು ಕರಗುವ ಮನುಷ್ಯ. ಕೈಲಾದ ಸಹಾಯವನ್ನು ಮಾಡ್ತಾರೆ. ಅವರು ಧರ್ಮಗುರುಗಳ ಮೇಲೆ ಹಲ್ಲೆ ಮಾಡಿದ್ರಾ, ಇಲ್ವಾ ಗೊತ್ತಿಲ್ಲ. ಎಲ್ಲರದ್ದೂ ಆರೋಪ-ಪ್ರತ್ಯಾರೋಪವಷ್ಟೆ. ಆದರೆ ಆಂಜನೇಯ ದೇವಸ್ಥಾನಕ್ಕೆ ಹೋದರು ಎಂಬ ಕಾರಣಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರೋದು ಎಷ್ಟು ಸರಿ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟಾರೆಯಾಗಿ ಜಾತ್ಯಾತೀತತೆ ಎಂಬ ಪದವು ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆಯೋ ಎಂಬ ಅನುಮಾನ ಇತ್ತಿಚಿನ ವಿದ್ಯಮಾನಗಳಿಂದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.