Headlines

ನಗರ ಶೂಟೌಟ್ ಪ್ರಕರಣ : ಅಂಬರೀಶ್ ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ – ಬೇಳೂರು ಆರೋಪ !!

ತೀರ್ಥಹಳ್ಳಿ : ನಗರ ಹೋಬಳಿಯ ನೇಗಿಲೋನಿ ಗ್ರಾಮದ ಅಂಬರೀಶ್ ಎನ್ನುವವರ ಗನ್ ಶಾಟ್ ಘಟನೆ ನಡೆದು 26 ದಿನವಾದರೂ ಕುಟುಂಬದವರಿಗೆ  ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಸರಿಯಾದ ರೀತಿಯಲ್ಲಿ ತನಿಖೆ ನೆಡೆಸಿ ಕುಟುಂಬದವರಿಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟದ ನಡೆಸಲಾಗುವುದು ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ನೇಗಿಲೋನಿ ಗ್ರಾಮದಲ್ಲಿ ಶೂಟೌಟ್ ಆಗಿದ್ದು ಬಡ ಕುಟುಂಬದ ಅಂಬರೀಶ್ ಎನ್ನುವವನನ್ನು ಕೀರ್ತಿ ಎನ್ನುವ ಯುವಕ ಆಗಸ್ಟ್ 26 ರಾತ್ರಿ ಸಂಜೆ 7 ಗಂಟೆಗೆ ಕರೆದುಕೊಂಡು ಹೋಗುತ್ತಾನೆ. ಮಾರನೇ ದಿನವಾದರೂ ಅಂಬರೀಶ್ ಮನೆಗೆ ಬರದಿದ್ದಾಗ ಎಲ್ಲರೂ ಹುಡುಕಲು ಹೋದಾಗ ಮದ್ಯಾನ್ಹದ ವೇಳೆ ಶವ ಸಿಗುತ್ತದೆ ಎಂದರು.


ವಿಶೇಷವೆಂದರೆ ಕುಟುಂಬದವರು ಪೊಲೀಸರಿಗೆ ಕಂಪ್ಲೇಂಟ್ ಮಾಡದಿದ್ದರೂ ವಿಷಯ ತಿಳಿಸದಿದ್ದರೂ ಆ ಜಾಗಕ್ಕೆ ಪೊಲೀಸರು ಬಂದಿದ್ದಾರೆ. ಕಂಪ್ಲೇಂಟ್ ಆಗದೆ ಏಕಾಏಕಿ ಪೊಲೀಸರು ಆ ಜಾಗಕ್ಕೆ ಹೇಗೆ ಬಂದರು ಪೊಲೀಸರಿಗೆ ಮಾಹಿತಿ ತಿಳಿಸಿದವರ್ಯಾರು ಎನ್ನುವುದೇ ಪ್ರೆಶ್ನೆಯಾಗಿದೆ ಎಂದರು.


ಈ ಎಲ್ಲಾ ಘಟನೆ ನಂತರ ಪೊಲೀಸರಿಗೆ , ಡಿ ವೈ ಎಸ್ ಪಿ ಗೆ, ಗೃಹಸಚಿವರಿಗೂ ಈ ಎಲ್ಲಾ ವಿಷಯ ಗೊತ್ತಿದೆ. ಆದರೂ ಈ ವಿಷಯದ ಬಗ್ಗೆ ಗೃಹಸಚಿವರು ಮೌನವಾಗಿರುವುದು ಯಾಕೆ ? ಗೃಹಸಚಿವರು ಏನ್ ಮಾಡ್ತಿದ್ದಾರೆ ? ಹಿಂದೂ ಕಾರ್ಯಕರ್ತರಾದ ಹರ್ಷ, ಪ್ರವೀಣ್ ಹತ್ಯೆಯಾದಾಗ ಆ ವಿಷಯವನ್ನು ದೊಡ್ಡದಾಗಿ ಮಾಡ್ತೀರಿ, ನಿಮ್ಮ ಕ್ಷೇತ್ರದಲ್ಲಿ ಶೂಟೌಟ್ ಆದರೂ ಕಣ್ಣು ಮುಚ್ಚಿ ಕುಳಿತ್ತಿದ್ದೀರಾ ಎಂದು ಬೇಳೂರು ಪ್ರೆಶ್ನಿಸಿದರು.


ಮುಸ್ಲಿಂ ಸಮುದಾಯದವರು ಸಾಯಿಸಿದ್ರೆ ಮಾತ್ರ ಹಿಂದುತ್ವ ಅಂತ ಪ್ರಚಾರ ಕೊಡ್ತೀರಾ, ಇವರು ಹಿಂದೂಗಳಲ್ವಾ, ಸಾಯಿಸಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು ತಮ್ಮ ಕಾರ್ಯಕರ್ತರನ್ನು ಉಳಿಸಲು ಈ ರೀತಿ ಪ್ರಯತ್ನವನ್ನು ಗೃಹಸಚಿವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂಗಡಿ ನಾಗರಾಜ್ ಎನ್ನುವವರ ಗನ್ ಎಂದು ಕೀರ್ತಿ ಹೇಳಿದ್ದು ಕೀರ್ತಿನೂ ಹಾಗೂ ನಾಗರಾಜ್ ಇಬ್ಬರು ಕಾಣಿಸುತ್ತಿಲ್ಲ. ಈ ಒಂದು ಕೊಲೆ ಕೇಸನ್ನು  ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ  ಪ್ರಯತ್ನಿಸುತ್ತಿದ್ದಾರೆ.


ಇನ್ನು ಕೀರ್ತಿ ಕುಟುಂಬದವರು ಅಂಬರೀಶ್ ಕುಟುಂಬದವರ ಬಳಿ ಕೇಸ್ ಮುಚ್ಚಿ ಹಾಕಲು ಪೊಲೀಸರ ಸಮ್ಮುಖದಲ್ಲೆ ರಾಜೀಯಾಗಲು ಎರಡು ಲಕ್ಷ ಕೊಡಲು ಬಂದಿದ್ದರು. ಡಿ ವೈ ಎಸ್ ಪಿ ಕೂಡ ಇದರಲ್ಲಿ ಶಾಮಿಲಾಗಿದ್ದಾರೆ ಎಂದು ಗೋಪಾಲಕೃಷ್ಣ ಗುಡುಗಿದರು.


ಈ ಸಂದರ್ಭದಲ್ಲಿ ಟಿ ಎಲ್ ಸುಂದರೇಶ್, ಮತ್ತಿನಮನೆ ರಾಮಚಂದ್ರ, ಮಾಸ್ತಿಕಟ್ಟೆ ವಾಸಪ್ಪ, ವಿಕ್ರಂ,ಕುರುವಳ್ಳಿ ನಾಗರಾಜ್, ನಾಗರಾಜ್ ಪೂಜಾರಿ, ತಾರಾಮೂರ್ತಿ, ಸೋಮಣ್ಣ, ಪದ್ಭಾನಾಬ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.





ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *