ರಿಪ್ಪನ್‌ಪೇಟೆ : ಹೆಚ್ಚಿದ ಬೀದಿ ನಾಯಿಗಳ ಉಪಟಳ -ಜೀವ ಬಲಿ ಪಡೆಯುವ ಮುನ್ನ ಎಚ್ಚೆತ್ತುಕೊಳ್ಳಲಿ ಗ್ರಾಮಾಡಳಿತ|Stray dogs attack

ರಿಪ್ಪನ್‌ಪೇಟೆ : ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗ್ತಿದೆ. ಅದಕ್ಕಂತಲೇ ಅನೇಕ ಮಂದಿ ವಿವಿಧ ಜಾತಿಯ ನಾಯಿಗಳನ್ನು ಮನೆಗೆ ತಂದು ಸಾಕಲು ಮುಂದಾಗಿದ್ದಾರೆ. ಆದರೆ  ಕೆಲ ಬಡಾವಣೆಯಲ್ಲಿರುವ ರಾಕ್ಷಸ ರೂಪದ ಬೀದಿ ನಾಯಿಗಳ ಕಾಟದಿಂದ ಮಕ್ಕಳನ್ನು ಮನೆಯಿಂದ ಹೊರ ಕಳಿಸುವುದಕ್ಕೂ ಪೋಷಕರು ಭಯಪಡುವ ಕಾಲ ಬಂದಿದೆ.


ನಿನ್ನೆಯ ದಿನ ಭದ್ರಾವತಿಯಲ್ಲಿ ನಾಯಿ‌ ದಾಳಿಗೆ ಮಗು ಸಾವನ್ನಪ್ಪಿದ ಬೆನ್ನಲ್ಲೇ ಶಿವಮೊಗ್ಗ ನಗರದಲ್ಲಿ ಇಂದು ನಾಲ್ಕು ವರ್ಷದ ಮಗು ಮೇಲೆ ನಾಯಿ ದಾಳಿ ನಡೆಸಿದೆ.ಅದೇ ತರಹದ ಪ್ರಕರಣವೊಂದು ಪಟ್ಟಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿರಲಿಲ್ಲ.

.     ( ಭದ್ರಾವತಿಯಲ್ಲಿ ಬೀದಿನಾಯಿ ದಾಳಿಗೆ ಮೃತಪಟ್ಟ ಮಗು)


ಕಳೆದ ನವೆಂಬರ್ 13 ರಂದು ಶಿವಮೊಗ್ಗ ರಸ್ತೆಯ ಬನ್ನಿ ನಗರದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ವಿನಾಯಕ(8) ಶಾಲೆಗೆ ಬರುವಾಗ ಬೀದಿ ನಾಯಿಗಳು ದಾಳಿ ಮಾಡಿ ತೊಡೆ ಬಾಗವನ್ನು ಕಚ್ಚಿತ್ತು.ಆ ಬಾಲಕನಿಗೆ ಪಟ್ಟಣದ ಭೀಮರಾಜ್ ಮತ್ತು ಚಿಪ್ಲಿ ರಾಘವೇಂದ್ರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಾಡಳಿತದ ಗಮನಕ್ಕೆ ತಂದಿದ್ದರು ಸಹ ಸರಿಯಾಗಿ ಸ್ಪಂದಿಸಿರಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.




ಪಟ್ಟಣದ ಕೆಲ ಬಡಾವಣೆಯ ಜನರು ರಾತ್ರಿ ವೇಳೆ ತಮ್ಮ ಮನೆಗಳಿಗೆ ನಿರ್ಭಯವಾಗಿ ತೆರಳೋದಕ್ಕೂ ಆತಂಕ ಪಡುವ ವಾತಾವರಣ ಸೃಷ್ಡಿಯಾಗಿದೆ‌‌. ಇದಕ್ಕೆಲ್ಲಾ ಮೂಲ ಕಾರಣವೇ ಬೀದಿ ನಾಯಿಗಳ ಹಾವಳಿ. 




ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು,ಮಹಿಳೆಯರು ಬೆಳಗಿನ ವಾಯುವಿಹಾರ ಹಾಗೂ ಸಂಜೆ ಸಂಧರ್ಭದಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. 




ಗ್ರಾಮಾಡಳಿತ ಕೇವಲ ಆದಾಯಕ್ಕಾಗಿ ಶ್ರಮಿಸದೇ ಅಲ್ಪವಾದರೂ ಜನಹಿತಕ್ಕೂ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.
 
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಾಡಳಿತ ಎಚ್ಚೆತ್ತುಕೊಂಡು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *