ರಸ್ತೆ ಸುರಕ್ಷತಾ ನಿಯಮ ಪಾಲಿಸಿ : ವೀರೇಶ್
ರಿಪ್ಪನ್‌ಪೇಟೆ : ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆಯಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯಲಿವೆ ಎಂದು ಸಾಗರ ARTO ವೀರೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತ ಬಳಗ, ಎನ್‌ಎಸ್‌ಎಸ್ ಘಟಕ, ಪೊಲೀಸ್ ಠಾಣೆ ರಿಪ್ಪನ್‌ಪೇಟೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಾಗರ ಇವರ ಸಂಯುಕ್ತಾಶ್ರಯದಲ್ಲಿ ‘ವಾಹನ ಚಾಲನಾ ಪರವಾನಗಿ ಅರಿವು’ ಮತ್ತು ಎಲ್‌ಎಲ್‌ಆರ್ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ ಸುರಕ್ಷತಾ ಸಾಧನಗಳಾದ ಹೆಲ್ಮೆಟ್, ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಇದರಿಂದ ನಮ್ಮ ಜೀವವನ್ನು ನಾವೇ ಕಾಪಾಡಿಕೊಂಡಂತಾಗುತ್ತದೆ. ರಸ್ತೆಗಳಲ್ಲಿ ಅಳವಡಿಸಿದ ಸೂಚನಾ ಫಲಕಗಳನ್ನು ಗಮನಿಸಿ ವಾಹನ ಓಡಿಸಬೇಕು,ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಸುರಕ್ಷತಾ ಕ್ರಮಗಳು, ನಿಯಮಗಳ ಪಾಲನೆಯಿಂದ ಅಪಘಾತ ತಡೆಯಲು ಸಾಧ್ಯವಿದೆ ಎಂದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಕಿಕೊಳ್ಳಬೇಕು. ಅಲ್ಲದೆ, ವಾಹನವನ್ನು ನಿಧಾನವಾಗಿ ಚಲಾಯಿಸುವ ಮೂಲಕ ಜೀವ ರಕ್ಷಣೆಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಪ್ರತಿವರ್ಷ ಹಲವಾರು ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪಿಎಸ್‌ಐ ಪ್ರವೀಣ್ ಎಸ್ ಪಿ ಮಾತನಾಡಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅಗತ್ಯವಾಗಿ ಪಾಲಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಡೆಯಬೇಕು ಪಾಲಿಸದೇ ಇದ್ದಲ್ಲಿ ಯಾವುದೇ ಮುಲಾಜಿಲ್ಲದೇ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು,18 ವರ್ಷ ತುಂಬಿದ ನಂತರ ವಾಹನ ಚಲಾಯಿಸಬೇಕಾದರೆ ಸಂಬಂಧಿತ ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿರಲೇಬೇಕು. ಇದುವರೆಗೆ ಪರವಾನಗಿ ಮಾಡಿಸಿಕೊಳ್ಳದ ವಿದ್ಯಾರ್ಥಿಗಳಿಗಾಗಿಯೇ ನಿಮ್ಮ ಕಾಲೇಜಿನಲ್ಲಿಯೇ ಲೈಸೆನ್ಸ್ ಮಾಡಿಸಲು ಅವಕಾಶವನ್ನು ಕಲ್ಪಿಸಿದ್ದೇವೆ. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.
ಪ್ರೊ. ನರೇಂದ್ರ ಕುಳಗಟ್ಟಿ ಮಾತನಾಡಿ ಸ್ವಾತಂತ್ರö್ಯ ಪೂರ್ವದಿಂದಲೂ ರಾಷ್ಟದ ಹಿತಚಿಂತನೆಯನ್ನು ಬಯಸಿ ಅನೇಕ ಹೋರಾಟಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಾಗೂ ಸ್ವತಂತ್ರ ಭಾರತದ ಪ್ರಗತಿಗೆ ಪೂರಕವಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪತ್ರಿಕೆಗಳು ಮತ್ತು ಪತ್ರಕರ್ತರು ಈ ಸಮಾಜದ ಸಾಕ್ಷಿ ಪ್ರಜ್ಞೆಗಳು ಎಂದು ಹೇಳಿದರು.
ಕಳೆದೆರಡು ದಶಕಗಳ ಹಿಂದೆ ಜನರ ಮುಖ್ಯವಾಹಿನಿಯಾಗಿದ್ದ ದಿನಪತ್ರಿಕೆಗಳು ನಂತರದ ದಿನಗಳಲ್ಲಿ ದೂರದರ್ಶನ, ಸಮಾಜಿಕ ಜಾಲತಾಣಗಳಾಗಿ ತನ್ನ ವೇಗ ಮತ್ತು ವ್ಯಾಪ್ತಿಯ ವಿಸ್ತರಿಸಿಕೊಂಡಿದೆ. ಸಮಾಜದಲ್ಲಿನ ಎಲ್ಲಾ ಹೋರಾಟ ಜಾಗೃತಿ ಮೂಢಿಸುವ ನಿತ್ಯಜನದನಿಗಳಾಗಿವೆ. ಪತ್ರಕರ್ತರು ಸುದ್ಧಿ ಹುಡುಕುವ ದಾವಂತದಲ್ಲಿ ಲೋಕಹಿತವನ್ನು ಬಯಸುವ ಸ್ವಯಂ ಸೇವಕರಾಗಿದ್ದಾರೆ. ಪ್ರತಿನಿತ್ಯ ಸಮಾಜದ ಎಲ್ಲಾ ಅಂಕುಡೊಂಕುಗಳನ್ನು ಸರಿಪಡಿಸುವ ಪತ್ರಕರ್ತರು ತನ್ನ, ಕುಟುಂಬದ ತುಮುಲಗಳಿಗೆ ಬೇರೆಯವರಲ್ಲಿ ಅಂಗಲಾಚದೆ ಸ್ವಾಭಿಮಾನಿಗಳಾಗಿದ್ದಾರೆ.
ತಮ್ಮ ದೈನಂದಿನ ಕಾರ್ಯತತ್ಪರತೆಯ ನಡುವೆಯು ವಿದ್ಯಾರ್ಥಿಗಳಿಗೆ ವಾಹನ ಚಾಲನಾ ಕಲಿಕಾ ಪರವಾನಗಿ ನೊಂದಣಿ ಕಾರ್ಯಕ್ರಮ ಆಯೋಜಿಸಿರುವುದು ಅವರಲ್ಲಿರುವ ಸಮಾಜದ ಕಾಳಜಿಯನ್ನು ತೋರಿಸುತ್ತದೆ ಎಂದು ಪ್ರಶಂಸಿಸಿದರು. ಸಾರ್ವಜನಿಕರು ದಿನಪತ್ರಿಕೆಗಳನ್ನು ಓದುವ ಜೊತೆಗೆ ನಿಸ್ವಾರ್ಥಪತ್ರಕರ್ತರಿಗೂ ಗೌರವಾಧಾರಗಳನ್ನು ನೀಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 270ಕ್ಕೂ ಅಧಿಕ ವಿದ್ಯಾರ್ಥಿಗಳು ಎಲ್‌ಎಲ್‌ಆರ್‌ಗೆ ನೊಂದಾವಣೆ ಮಾಡಿಸಿದರು.
ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಧನಲಕ್ಷಿ, ವಾಹನ ನಿರೀಕ್ಷಕ ವಾಸುದೇವ ಎನ್.ಡಿ.,ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು , ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ,ಡ್ರೈವಿಂಗ್ ಶಾಲೆಯ ರವಿ ಎನ್ , ಕೃಷ್ಣೋಜಿ , ಅಶ್ವಲ್ ಪ್ರಾಧ್ಯಾಪಕರಾದ ರತ್ನಾಕರ ಕುನಗೋಡು, ಶಿಲ್ಪಾ ಪಾಟೀಲ್, ದೇವರಾಜ್ ಇನ್ನಿತರರಿದ್ದರು.