Headlines

ಧಾರ್ಮಿಕ ಹಬ್ಬದಲ್ಲಿ ಸೌಹಾರ್ದತೆಯ ನವ ಚೈತನ್ಯಕ್ಕೆ ರಿಪ್ಪನ್‌ಪೇಟೆ ಮಾದರಿ – ಉದ್ಯಮಿ ಮಹೇಂದ್ರ ಕುಮಾರ್

ಧಾರ್ಮಿಕ ಹಬ್ಬದಲ್ಲಿ ಸೌಹಾರ್ದತೆಯ ನವ ಚೈತನ್ಯಕ್ಕೆ ರಿಪ್ಪನ್‌ಪೇಟೆ ಮಾದರಿ – ಉದ್ಯಮಿ ಮಹೇಂದ್ರ ಕುಮಾರ್

ಗಣೇಶೋತ್ಸವದಲ್ಲಿ ಸರ್ವಧರ್ಮ ಒಕ್ಕೂಟದ ಯುವಕರಿಂದ ಪಾನೀಯ ವಿತರಣೆ

ರಿಪ್ಪನ್‌ಪೇಟೆ:– ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವವು ಭಕ್ತಿ, ಭಾವನೆ ಹಾಗೂ ವೈವಿಧ್ಯತೆಯ ಸಮಾಗಮದಂತೆ ಸಾಗಿತು. ಉತ್ಸವದ ಸಂದರ್ಭದಲ್ಲಿ ಪಟ್ಟಣದ ಸರ್ವಧರ್ಮ ಸೌಹಾರ್ದ ಒಕ್ಕೂಟದ ಯುವಕರು ಶ್ರದ್ಧಾಳುಗಳಿಗೆ ತಂಪಿನ ಪಾನೀಯಗಳನ್ನು ವಿತರಿಸಿ ಸೌಹಾರ್ದತೆಯ ಶ್ರೇಷ್ಠ ಉದಾಹರಣೆಯನ್ನು ಮೆರೆದರು.

ರಾಜಬೀದಿ ಮೆರವಣಿಗೆ ತೀರ್ಥಹಳ್ಳಿ ರಸ್ತೆ ಭಾಗಕ್ಕೆ ಆಗಮಿಸಿದಾಗ, ಸ್ಥಳೀಯ ಉದ್ಯಮಿ ಮಹೇಂದ್ರಕುಮಾರ್ ಪಾನೀಯ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಧರ್ಮ ಯಾವದೇ ಇರಲಿ, ಮಾನವೀಯತೆ ಅತ್ಯಂತ ಮಹತ್ವದ್ದು. ಸಮಾಜದಲ್ಲಿ ಬಾಂಧವ್ಯ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರವೇ ನಮ್ಮ ಶಕ್ತಿಯ ಮೂಲ. ಇಂದು ಇಲ್ಲಿ ನಡೆಯುತ್ತಿರುವ ಸೌಹಾರ್ದತೆ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿದೆ”.ಧಾರ್ಮಿಕ ಹಬ್ಬದಲ್ಲಿ ಸೌಹಾರ್ದತೆಯ ನವ ಚೈತನ್ಯಕ್ಕೆ ರಿಪ್ಪನ್‌ಪೇಟೆ ಪಟ್ಟಣವೂ ಎಲ್ಲಾ ಊರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖಂಡರಾದ ಆರ್.ಎ. ಚಾಬುಸಾಬ್, ಅಮೀರ್ ಹಂಜಾ, ರೆಹಮಾನ್ ಚಾಲಿ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಫ಼್ಜ಼ಲ್ ಬ್ಯಾರಿ, ಖಲೀಲ್, ರಿಯಾಜ್, ರಾಹಿಲ್ ಚಾಲಿ , ಸರ್ವಧರ್ಮ ಅಧ್ಯಕ್ಷರಾದ ಆಫ್ಜಲ್,ಉಪಾಧ್ಯಕ್ಷರಾದ ವಿಜಯ್ ಮಳವಳ್ಳಿ,ಕಾರ್ಯದರ್ಶಿಗಳಾದ ಅಫ್ನನ್, ಝಿಯಾದ್, ಸುಹೈಲ್ ಬ್ಯಾರಿ, ಸವಾದ್ ಇಬ್ರಾಹಿಂ ಸೇರಿದಂತೆ ಅನೇಕರು ಭಾಗವಹಿಸಿ ಧಾರ್ಮಿಕ ಭಾವನೆಗಳನ್ನು ಮೀರಿದ ಸಹಬಾಳ್ವೆಯ ಸಂದೇಶವನ್ನು ನೀಡಿದ್ದಾರೆ.