Headlines

ಸಾಗರ ತಾಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ – ಮುಖ್ಯಮಂತ್ರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ

ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ – ಮುಖ್ಯಮಂತ್ರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ

ಸಾಗರ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಹಾಲಪ್ಪ ಘೋಷಣೆ

ಸಾಗರ ತಾಲ್ಲೂಕನ್ನು ಜಿಲ್ಲೆಯಾಗಿ ಮಾಡೋದಕ್ಕೆ ಒತ್ತಾಯ ಹೆಚ್ಚಾಗಿದೆ. ನಿನ್ನೆಯಷ್ಟೇ ಸಾಗರ ನಾಗರೀಕರು ಈ ಸಂಬಂಧ ಸಭೆ ನಡೆಸಿ, ಮಹತ್ವದ ಚರ್ಚೆಯನ್ನು ನಡೆಸಲಾಗಿದೆ. ಮತ್ತೊಂದೆಡೆ ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಪರಿವರ್ತನೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ದಿನಾಂಕ 16-08-2025ರಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕೆಳದಿ ಸಂಸ್ಥಾತನವು ಕ್ರಿ.ಶ. 1499 ರಿಂದ 1763 ವರೆಗೆ ಸುಮಾರು 265 ವರ್ಷಗಳ ಕಾಲ ಕಳದಿ ಅರಸರಾದ ಕೆಳದಿ ಶಿವಪ್ಪನಾಯಕ ಹಾಗೂ ರಾಣಿ ಚನ್ನಮ್ಮ ಮುಂತಾದ ಮಹಾರಾಜರು ಆಡಳಿತ ನಡೆಸಿದ ಐತಿಹಾಸಿಕ ಪಟ್ಟಣವಾಗಿರುತ್ತದೆ. ಸಾಗರ ನಗರವು ಅತೀವೇಗವಾಗಿ ಬೆಳೆಯುತ್ತಿರುವ ಮಲೆನಾಡಿನ ಒಂದು ಸುಂದರ ನಗರ. ಸರ್ವೋತ್ತೋಮುಖ ಅಭಿವೃದ್ಧಿಯ ಜೊತೆಗೆ “ಉಳುವವನ ಹೊಲದೊಡೆಯ”ದಂತಹ ಕ್ರಾಂತಿಕಾರಕ ಕಾಗೋಡು ಸತ್ಯಗ್ರಹ ಮೂಲಕ ರೈತರಿಗೆ ಭೂಮಿ ಕೊಟ್ಟಂತಹ ನಗರವಾಗಿದೆ. ರಾಜ್ಯಕ್ಕೆ ವಿದ್ಯುತ್ ನ್ನು ನೀಡುತ್ತಿರುವ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಲಾಗಿದ್ದು, ಪ್ರವಾಸಿ ತಾಣಗಳಾದ ವಿಶ್ವವಿಖ್ಯಾತ ಜೋಗ ಜಲಪಾತ, ಕೆಳದಿ, ಇಕ್ಕೇರಿಯಂತಹ ಪುರಾತನ ದೇವಸ್ಥಾನವಿದ್ದು, ಶರಾವತಿ ನೀರಿನಲ್ಲಿ ಸಿಗಂಧೂರು ಚೌಡೇಶ್ವರಿ ದೇವಸ್ಥಾನವಿದ್ದು, ವಡಂಬೈಲು ಬಳ ಪದ್ಮಾವತಿ ದೇವಸ್ಥಾನ, ವರದಹಳ್ಳಿಯಲ್ಲಿ ಸದ್ಗುರು ಶ್ರೀಧರ ಸ್ವಾಮೀಜಿಗಳ ಪುಣ್ಯಕ್ಷೇತ್ರ ಸಾಗರ ಮಾರಿಕಾಂಬ ದೇವಸ್ಥಾನ ಹಾಗು ಮಹಾಗಣಪತಿ ದೇವಸ್ಥಾನಗಳ ಜಾತ್ರಾ ಉತ್ಸವಕ್ಕೆ ಲಕ್ಷಾಂತರ ಜನರು ಬಂದು ಹೋಗುವ ಪ್ರೇಕ್ಷಣೀಯ ಸ್ಥಳವಾಗಿವೆ.

ಸಾಗರ ತಾಲ್ಲೂಕು ವರದಾ ನದಿಯ ದಡದಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮಲೆನಾಡಿನ ಸುಂದರ ಪ್ರದೇಶವಾಗಿದ್ದು, ಬಹುತೇಕ ಪುದೇಶವು ಅರಣ್ಯದಿಂದ ಕೂಡಿದ್ದು, ಸಾಗರ ತಾಲ್ಲೂಕಿನ ಪಮುಖ ವಾಣಿಜ್ಯ ಬೆಳೆಗಳಾದ ಅಡಿಕೆಗೆ ಹೆಸರುವಾಸಿಯಾಗಿದೆ. ಅಡಿಕೆ ಬೆಳೆಯನ್ನು ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದ್ದು ಮತ್ತು ಭತ್ತ, ತೆಂಗು, ಬಾಳ ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ.

ಮುಂದುವರೆದು, ಸಾಗರ ತಾಲ್ಲೂಕಿನ ಸಾಗರ ತಾಲ್ಲೂಕು ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡದ್ದಾಗಿದ್ದು, ಹೊಸನಗರ ತಾಲ್ಲೂಕು, ಸೊರಬ ತಾಲ್ಲೂಕು, ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡು ಸಾಗರ ತಾಲ್ಲೂಕು ಉಪವಿಭಾಗೀಯ ಸ್ನಾನವನ್ನು ಹೊಂದಿರುತ್ತದೆ. ಸಾಗರದ ಅಕ್ಕ-ಪಕ್ಕದ ತಾಲ್ಲೂಕು ಸೊರಬದಿಂದ ಸಾಗರಕ್ಕೆ 32 ಕಿ.ಮೀ, ಹೊಸನಗರದಿಂದ ಸಾಗರಕ್ಕೆ 35 ಕಿ.ಮೀ, ಸಿದ್ಧಾಪುರದಿಂದ ಸಾಗರಕ್ಕೆ -35 ಕಿ.ಮೀ, ಶಿಕಾರಿಪುರದಿಂದ ಸಾಗರಕ್ಕೆ 40 ಕಿ.ಮೀ. ಅದೇ ರೀತಿ ಸಾಗರ ಪಟ್ಟಣದಿಂದ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ 72 ಕಿ.ಮೀ. ದೂರವಿದ್ದು, ಸಾಗರ ತಾಲ್ಲೂಕಿನ ತುತ್ತತುದಿಯಿಂದ ಶಿವಮೊಗ್ಗಕ್ಕೆ ಸುಮಾರು 170 ಕಿ.ಮೀ. ಗಿಂತ ಅಧಿಕ ದೂರವಿದ್ದು, ಹೊಸನಗರದಿಂದ ಶಿವಮೊಗ್ಗ ಜಿಲ್ಲೆ ಕೇಂದ್ರಕ್ಕೆ 66 ಕಿ.ಮೀ, ಸೊರಬದಿಂದ ಶಿವಮೊಗ್ಗಕ್ಕೆ 90 ಕಿ.ಮೀ, ಶಿಕಾರಿಪುರದಿಂದ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ-55 ಕಿ.ಮೀ, ಸಿದ್ಧಾಪುರದಿಂದ ಕಾರವಾರ ಜಿಲ್ಲೆ ಕೇಂದ್ರಕ್ಕೆ-141 ಕಿ.ಮೀ. ದೂರವಿರುತ್ತದೆ. ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಆಸ್ಪತ್ರೆ, ಕೆಲಸ ಕಾರ್ಯಗಳಿಗೆ ತೆರಳಲು ದೂರವಾಗಿರುತ್ತದೆ.

ಸಾಗರ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸಿಸುತ್ತಿದ್ದು, ಸುಮಾರು 03 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ. ಮೂಲಭೂತ ಸೌಕರ್ಯಗಳಾದ 03 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಮೈಸೂರು/ಬೆಂಗಳೂರು-ಸಾಗರ-ತಾಳಗುಪ್ಪ ರೈಲ್ವೆ, ಮಾರ್ಗಗಳು ಹೊಂದಿದ್ದು, ಸಾಗರ ಪಟ್ಟಣದಲ್ಲಿ ಎ.ಸಿ ಕಛೇರಿ, ಡಿ.ವೈ.ಎಸ್.ಪಿ ಕಛೇರಿ, ಆಡಳಿತ ಸೌಧ, ತಾಲ್ಲೂಕು ಪಂಚಾಯಿತಿ ಕಛೇರಿ, ಸಾಗರ ಟೌನ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ, ಹೆಚ್ಚುವರಿ ಜಿಲ್ಲಾ ನ್ಯಾಯಲಯ ಹಾಗೂ 100 ಹಾಸಿಗೆಗಳಿರುವ ಉಪವಿಭಾಗೀಯ ಆಸ್ಪತ್ರೆ ಹಾಗೂ 100 ಹಾಸಿಗೆಗಳಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರ್.ಟಿ.ಒ ಕಛೇರಿ ಹಾಗೂ ಆನಂದಪುರ ಬಳಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯವನ್ನು ಹೊಂದಿರುತ್ತದೆ. ಸಾಗರ ನಗರದಲ್ಲಿ ಪ್ರತ್ಯೇಕ ಕೈಗಾರಿಕಾ ವಲಯವಿದ್ದು, ಶಿಕ್ಷಣ ವಿಭಾಗದಲ್ಲಿ 04 ಪ್ರಥಮ ದರ್ಜೆ ಕಾಲೇಜುಗಳು, 02 ಸ್ನಾತಕೋತ್ತರ ವಿಭಾಗಗಳು, ಐ.ಟಿ.ಐ, ಡಿಪ್ಲೊಮೊ, 10 ಪದವಿ ಪೂರ್ವ ಕಾಲೇಜುಗಳು ಹಾಗೂ 06 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ 08 ಹಾಸ್ಟೆಲ್ ಗಳು, ಹಿಂದುಳಿದ ವರ್ಗಗಳ ಇಲಾಖೆಯ 28 ಹಾಸ್ಟೆಲ್ ಗಳನ್ನು ಹೊಂದಿರುತ್ತದೆ.

ಸಾಗರ-ಸೊರಬ-ಸಿದ್ದಾಪುರ-ಹೊಸನಗರ-ಶಿಕಾರಿಪುರ 05 ತಾಲ್ಲೂಕುಗಳನ್ನೊಳಗೊಂಡು ಕೇಂದ್ರ ಸ್ನಾನದಲ್ಲಿರುವುದರಿಂದ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ಅನೇಕ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯನ್ನಾಗಿ ಪರಿವರ್ತಿಸುವಂತೆ ಸಿಎಂ ಸಿದ್ಧರಾಮಯ್ಯ ಅವರನ್ನು ಪತ್ರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಕೋರಿದ್ದಾರೆ.

ಸಾಗರ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಹರತಾಳು ಹಾಲಪ್ಪ ಘೋಷಣೆ

ಸಾಗರ ಜಿಲ್ಲೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಶಿವಮೊಗ್ಗ ಜಿಲ್ಲೆಯನ್ನು ಒಂದೊಮ್ಮೆ ಒಡೆಯುವುದಾದರೆ ಸಾಗರ ಜಿಲ್ಲೆಯಾಗಲು ಎಲ್ಲಾ ಅರ್ಹತೆ ಇದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಸೆ.7ರ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಾಗರದಲ್ಲಿ ಉಪವಿಭಗೀಯ ಆಸ್ಪತ್ರೆ, ಜಿಲ್ಲಾ ಸತ್ರ ನ್ಯಾಯಾಲಯ, ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನಮಕ್ಕಿ ಜಲಾಶಯ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿವೆ.

ಮಲೆನಾಡಿನ ಹೃದಯಭಾಗದ ಜೊತೆ ಆರ್ಥಿಕ ವಹಿವಾಟಿನಲ್ಲೂ ಸಾಗರ ಮಂಚೂಣಿ ಕಾಯ್ದುಕೊಂಡಿದೆ ಎಂದರು.

1996 ರಲ್ಲಿ ಶಿವಮೊಗ್ಗ ಜಿಲ್ಲೆ ಒಡೆಯುವ ಪ್ರಸ್ತಾಪ ಕೇಳಿ ಬಂದಿತ್ತು. ಆಗ ನಾನು ಮತ್ತು ಕೆಲ ಸ್ನೇಹಿತರು ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸಾಗರ ಜಿಲ್ಲೆ ಮಾಡುವ ಪ್ರಸ್ತಾಪ ಮುಂದಿರಿಸಿದ್ದೆವು. ನಂತರ ಸಾಗರದಲ್ಲಿ ಈ ಸಂಬಂಧ ಹೋರಾಟ ಸಹ ನಡೆದಿತ್ತು. ಆದರೆ ಸರ್ಕಾರ ಹೊಸ ಜಿಲ್ಲೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದಾಗ ಜಿಲ್ಲಾ ಪ್ರಸ್ತಾಪ ಹಿಂದೆ ಹೋಗಿತ್ತು. ಈಗ ಸಾಗರ ಜಿಲ್ಲೆ ಮಾಡಬೇಕು ಎನ್ನುವ ಕೂಗು ಪ್ರಬಲಗೊಳ್ಳುತ್ತಿದೆ ಎಂದರು.

ಮಲೆನಾಡು ಸಂಸ್ಕೃತಿ ಹೊಂದಿರುವ ಸಾಗರವನ್ನು ಜಿಲ್ಲಾ ಕೇಂದ್ರವಾಗಿಸಿ, ಸೊರಬ, ಹೊಸನಗರ, ಶಿಕಾರಿಪುರ, ಸಿದ್ದಾಪುರವನ್ನು ಸೇರಿಸಲು ಅವಕಾಶ ಇದೆ. ಈ ತಾಲೂಕುಗಳಲ್ಲಿ ಬಹುತೇಕ ಆಚಾರ, ವಿಚಾರ ಸಂಸ್ಕೃತಿ ಎಲ್ಲವೂ ಒಂದೇ ಇದೆ. ಅರ್ಕಳ, ಕೊಂಜವಳ್ಳಿ ಇನ್ನಿತರೆ ಭಾಗದವರು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲು ಸುಮಾರು 170ಕಿ.ಮೀ. ಕ್ರಮಿಸಬೇಕು. ಸಾಘರ ಜಿಲ್ಲೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸಂಘ ಪರಿವಾರ ಹಿಂದೆಯೇ ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾಗರ ಜಿಲ್ಲೆಯಾದರೆ ಅಭಿವೃದ್ಧಿಯ ಜೊತೆಗೆ ಜನಜೀವನ ಸಹ ಉತ್ತಮಗೊಳ್ಳುತ್ತದೆ ಎಂದು ಹೇಳಿದ್ದಾರೆ.