ಅವ್ಯಹಾರ ಆರೋಪ : ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಸದಸ್ಯರ ಪ್ರತಿಭಟನೆ
ಶಿಕಾರಿಪುರ : ತೆರಿಗೆ ಸಂಗ್ರಹ ಹಣ ಅಂದೇ ಬ್ಯಾಂಕ್ಗೆ ಜಮೆ ಮಾಡದೆ ಅವ್ಯವಹಾರ ನಡೆಸಿದ್ದಾರೆ, ನೀರುಗಂಟಿ ಹುದ್ದೆಯಲ್ಲಿದ್ದವರಿಗೆ ಬಿಲ್ಕಲೆಕ್ಟರ್ ಹುದ್ದೆ ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಿ ಗೊದ್ದನಕೊಪ್ಪ ಗ್ರಾ.ಪಂ. ಸದಸ್ಯರು ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿದ್ದ ಇಮ್ತಿಯಾಜ್ ಅಹಮದ್ ನಾಲ್ಕು ಹಳ್ಳಿಗಳ ತೆರಿಗೆ ಸಂಗ್ರಹ ಹಣ ಬ್ಯಾಂಕ್ಗೆ ಕಟ್ಟದೇ ೮ರಿಂದ ೩೦ದಿನದವರೆಗೂ ಹಣ ಕೈಯಲ್ಲಿ ಇಟ್ಟುಕೊಂಡಿರುವ ದಾಖಲೆಗಳಿವೆ, ನೀರುಗಂಟಿ ಆಗಿದ್ದ ಮಹಿಳೆಗೆ ಬಿಲ್ ಕಲೆಕ್ಟರ್ ಆಗಿ ನೇಮಿಸಿದ್ದಾರೆ, ೧೫ನೇ ಹಣಕಾಸು ವರ್ಗ ಒಂದರ ಹಣ ದುರ್ಬಳಕೆ ಮಾಡಿದ್ದು ಈ ಕುರಿತು ಲಿಖಿತ ದೂರು ನೀಡಿದರೂ ಯಾವುದೆ ಪ್ರಯೋಜನ ಆಗಿಲ್ಲ ಅದಕ್ಕಾಗಿ ಗ್ರಾ.ಪಂ. ಎಲ್ಲ ಸದಸ್ಯರು ಕಚೇರಿಗೆ ಬೀಗಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಧ್ಯಕ್ಷೆ ಡಿ.ರೇಖಾ ಆರೋಪಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಾ.ಪಂ. ಇಒ ನಾಗರಾಜ್ ಭೇಟಿ ನೀಡಿ ಸದಸ್ಯರೊಂದಿಗೆ ಮಾತನಾಡಿ ೧೦ದಿನದೊಳಗೆ ಪ್ರಕರಣ ಕುರಿತು ತನಿಖೆ ನಡೆಸುವ ಭರವಸೆ ನೀಡಿದ ನಂತರ ಧರಣಿ ಮುಕ್ತಾಯಗೊಳಿಸಲಾಯಿತು.