ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಅಗತ್ಯ – ಧನಲಕ್ಷ್ಮಿ ಗಂಗಾಧರ್
ರಿಪ್ಪನ್‌ಪೇಟೆ : ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಕಲಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು.
ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಶನಿವಾರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅತಿ ವೇಗದಲ್ಲಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಜತೆಗೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಅತ್ಯಗತ್ಯವಿದೆ. ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಬಗ್ಗೆ ಸಾಕಷ್ಟು ಅರಿವು ಇರಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಬದುಕುವುದು ಕಷ್ಟಕರವಾಗಲಿದೆ ಎಂದು ತಿಳಿಸಿದರು.
ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅಷ್ಟೇ ಮಿತ ವ್ಯಯದೊಂದಿಗೆ ಉಳಿತಾಯ ಮಾಡುವ ಸಾಮಾನ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಯಾವುದೇ ವಸ್ತುಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ಮಕ್ಕಳ ಸಂತೆಯಲ್ಲಿ ಸೊಪ್ಪು-ತರಕಾರಿ, ಬಾಳೆಹಣ್ಣು, ಕಲ್ಲಂಗಡಿ ಹಾಗೂ ಅವರೆಕಾಯಿ ವ್ಯಾಪಾರ ಜೋರಾಗಿಯೇ ನಡೆಯಿತು. ಜತೆಗೆ ಪಾನೀಪುರಿ, ಚುರುಮುರಿ, ಹೋಳಿಗೆ, ಚಕ್ಕುಳಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಮಿಠಾಯಿ ಹಾಗೂ ಫ್ರೂಟ್ ಸಲಾಡ್ ಸೇರಿದಂತೆ ವಿವಿಧ ಖಾದ್ಯಗಳು ಗ್ರಾಹಕರ ಬಾಯಲ್ಲಿ ನೀರು ಬರಿಸಿದ್ದು ಖರೀದಿಸಿ ಸವಿದರು.
ಬಳಪ ಹಿಡಿಯುವ ಕೈಯಲ್ಲಿ ಮಕ್ಕಳು ತರಕಾರಿಗಳನ್ನು ತಕ್ಕಡಿಯಲ್ಲಿ ತೂಗಿ ಗ್ರಾಹಕರಿಂದ ಹಣವನ್ನು ಪಡೆಯುತ್ತಿದ್ದ ದೃಶ್ಯ ಕಂಡು ಪೋಷಕ ವರ್ಗ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.
ಮೂಲಂಗಿ, ಬದನೆಕಾಯಿ, ಹಸಿಮೆಣಸಿನಕಾಯಿ, ಅವರೆಕಾಯಿ, ಹಾಗಲಕಾಯಿ, ತೆಂಗಿನಕಾಯಿ, ಪಪ್ಪಾಯಿ, ಮಂಡಕ್ಕಿ, ಪಾನಿಪೂರಿ, ಜ್ಯೂಸ್ ಹೀಗೆ ದಿನಸಿ ಸಾಮಾನು ಸೇರಿದಂತೆ ಸ್ಟೇಷನರಿ ಸಾಮಾಗ್ರಿಗಳ ಮಾರಾಟದಲ್ಲಿ ಮಕ್ಕಳು ಪೋಷಕರನ್ನು ಮತ್ತು ಗ್ರಾಹಕರನ್ನು ಸಾರ್ವಜನಿಕರನ್ನು ತಮ್ಮತ್ತ ಆಕರ್ಷಿಸುವ ದೃಶ್ಯ ಕಂಡು ಹಲವರು ಬೆರಗಾಗಿ ನೋಡುವಂತೆ ಮಾಡಿತು.
ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ಪೋಷಕರ ಸಹಕಾರದೊಂದಿಗೆ ತಾವು ತಂದಂತಹ ತರಕಾರಿ, ಹಣ್ಣು-ಹಂಪಲು ಹಾಗೂ ಹೂವಿನ ವ್ಯಾಪಾರದಲ್ಲಿ ತಮ್ಮ ಬಳಿ ಗ್ರಾಹಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರು.
ಪಪ್ಪಾಯಿ 30 ರೂ. ಕೆ.ಜಿ. ಆದರೆ ಅವರೆಕಾಯಿ 20 ರೂ., ಬದನೆಕಾಯಿ 30 ರೂ., ಬಾಳೆದಿಂಡು 20 ರೂ., ನೆಲ್ಲಿಕಾಯಿ 10 ರೂ., ಕುಂಬಳಕಾಯಿ ಕೆ.ಜಿ.ಗೆ 20 ರೂ. ಹೀಗೆ ದರ ಪಟ್ಟಿ ಹಾಕಿ ವ್ಯಾಪಾರ ಮಾಡುತ್ತಿದ್ದ ಮಕ್ಕಳ ಬಳಿ ಹೋಗಿ ತರಕಾರಿಯ ಬೆಲೆ ಕೇಳಿ ಮಕ್ಕಳನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕೂಡಾ ತಮ್ಮ ಸಮಯ ಪ್ರಜ್ಞೆ, ಜಾಣ್ಮೆಯಿಂದ ಮಕ್ಕಳು ತರಕಾರಿಯ ಮೇಲೆ ಕಗ್ಗಾವಲು ಇಟ್ಟು ಎಲ್ಲಿಯೂ ಮೋಸವಾಗದಂತೆ ಮುಂಜಾಗ್ರತೆ ವಹಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.
ಒಟ್ಟಾರೆಯಾಗಿ ವ್ಯಾಸಂಗದ ಜೊತೆ ಯಾವು ಏನಾದರೊಂದು ಸಾಧನೆ ಮಾಡುತ್ತೇವೆಂಬ ಉತ್ಸಾಹದಲ್ಲಿ ಮಕ್ಕಳು ತರಕಾರಿ ದಿನಸಿ ಸಾಮಾನು ಪಾನಿಪೂರಿ, ಮಸಾಲ ಮಂಡಕ್ಕಿ ಹೀಗೆ ಬಗೆಬಗೆಯ ವಸ್ತುಗಳ ಮಾರಾಟ ಮಾಡಲು ನಾವು ಸದಾಸಿದ್ದ ಎಂಬುದನ್ನು ಸಾಬೀತು ಪಡಿಸಿದರು. 240 ವಿದ್ಯಾರ್ಥಿಗಳು ಸುಮಾರು ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದು ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎನ್ನಲಾಗುತ್ತಿದೆ.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೆಚ್.ಎನ್.ಉಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶೈಲಾ ಶಿಕ್ಷಕಿ ಸುಲೇಖಾ , ನಗೀನಾ , ಶ್ರೀಧರ್ ಚಿಗುರಿ ಹಾಗೂ ಇನ್ನಿತರರಿದ್ದರು.