ಬಾಯ್ಲರ್ ಸ್ಫೋಟ ಪ್ರಕರಣ – ನಾಪತ್ತೆಯಾಗಿದ್ದ ವ್ಯಕ್ತಿ ಸಾವು
ಭದ್ರಾವತಿ, ಡಿ. 20: ಭದ್ರಾವತಿ ನಗರದ ಚನ್ನಗಿರಿ ರಸ್ತೆಯ ರೈಸ್’ಮಿಲ್ ವೊಂದರಲ್ಲಿ ಡಿ. 19 ರ ಸಂಜೆ ನಡೆದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ, ಓರ್ವರು ಮೃತಪಟ್ಟಿರುವುದು ಖಚಿತವಾಗಿದೆ.
ಈ ವಿಷಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ‘ಘಟನೆಯಲ್ಲಿ ರಘು ಎಂಬುವರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಅವರ ಮೃತದೇಹ ಪತ್ತೆ ಹಚ್ಚಲಾಗಿದೆ’ ಎಂದು ಶುಕ್ರವಾರ ಮಾಹಿತಿ ನೀಡಿದ್ದಾರೆ.
ರೈಸ್’ಮಿಲ್ ನ ಒಂದು ಬಾಯ್ಲರ್ ಸ್ಪೋಟಗೊಂಡಿದ್ದು, ಒಟ್ಟಾರೆ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಫೋಟದ ರಭಸಕ್ಕೆ ರೈಸ್ ಮಿಲ್ ಕಟ್ಟಡಕ್ಕೆ ಭಾರೀ ಪ್ರಮಾಣದ ಧಕ್ಕೆಯಾಗಿದೆ. ಕಟ್ಟಡದ ಕೆಲ ಭಾಗ ಕುಸಿದು ಬಿದ್ದಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಪ್ರಮಾಣ ಎಷ್ಟೆಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಬಾಯ್ಲರ್ ಸ್ಫೋಟದಿಂದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಶಬ್ಧ ಕೇಳಿಬಂದಿತ್ತು. ಹಲವೆಡೆ ಮನೆಯ ಕಿಟಕಿ – ಬಾಗಿಲುಗಳು ಅಲುಗಾಡಿತ್ತು. ಇದು ನಾಗರೀಕರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಪೊಲೀಸರು, ಮೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿ – ಸಿಬ್ಬಂದಿಗಳ ತಂಡ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.
 
                         
                         
                         
                         
                         
                         
                         
                         
                         
                        