ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ – ಹರತಾಳು ಹಾಲಪ್ಪ 
ರಿಪ್ಪನ್ಪೇಟೆ : ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಷತ್ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಅತಿ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಿದ್ದು ಪ್ರತಿಯೊಬ್ಬ ಘಟ ನಾಯಕರು 
8ರಿಂದ 10 ಮತದಾರರನ್ನು ಸಂಪರ್ಕಿಸುವ ಮೂಲಕ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತಿದ್ದಾರೆ.ಮೈತ್ರಿ ಅಭ್ಯರ್ಥಿಗಳಾದ ಬೋಜೆಗೌಡ ಹಾಗೂ ಡಾ ಧನಂಜಯ ಸರ್ಜಿ 100 ಪ್ರತಿಶತ ಗೆಲ್ಲುವ ವಿಶ್ವಾಸವಿದೆ ಎಂದರು.
ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ತಾವು ಎನ್.ಡಿ.ಎ ಪಕ್ಷದಿಂದ ಸ್ಪರ್ಧಿಸಿರುವ ಎನ್ ಡಿಎ ಮೈತ್ರಿ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬೆಂಬಲಿಸುವಂತೆ ಈ ಸಂಧರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿದರು.
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಎಂಎಸ್ ಐಎಲ್ ನಿಗಮದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ನನಗೆ ಇರುವ ಅನುಭವದ ಪ್ರಕಾರ ಒಂದು ನಿಗಮದಿಂದ ಹಣ ವರ್ಗಾವಣೆಗೆ ಅದರದೇ ಆದ ನಿಯಮಾವಳಿ ಇದೆ ಆದರೆ ಅದನ್ನೆಲ್ಲಾ ಗಾಳಿಗೆ ತೂರಿ ಪ್ರಭಾವಿ ವ್ಯಕ್ತಿಗಳ ಹುನ್ನಾರದಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.
 ಕಾಂಗ್ರೆಸ್ ಕೃಪಾಪೋಷಿತ ಬೇನಾಮಿ ಕಂಪನಿಗಳಿಗೆ ನಿಗಮದ ಹಣ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರ  ಸಚಿವರ ಬೆನ್ನಿಗೆ ಇರಬಹುದು ಆದರೆ ಪ್ರಕರಣ ಸಿಬಿಐ ಗೆ ವರ್ಗಾವಣೆಯಾದ ತಕ್ಷಣ ಅವರ ಬಂಧನವಾಗುವುದಂತು ಸತ್ಯ, ಕೂಡಲೇ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಒತ್ತಾಯಿಸಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಯಲ್ಲಿ NDA ಬಹುಮತ ಬಂದಿರುವುದರ ಬಗ್ಗೆ ಮಾತನಾಡಿ ಮತಗಟ್ಟೆ ಸಮೀಕ್ಷೆ ನಡೆಸಿದ ಎಲ್ಲಾ ಏಜೆನ್ಸಿಗಳಲ್ಲೂ ಪ್ರಧಾನಿ ಮೋದಿ ತ್ರಿವಿಕ್ರಮ ಸಾಧನೆಗೈಯುವುದು ಖಾತ್ರಿಯಾಗಿದೆ, ಎನ್.ಡಿ.ಎ ಮೈತ್ರಿಕೂಟ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಮೋದಿ ಜೀ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವ ಸಮೀಕ್ಷಾ ವರದಿ ಬಹಿರಂಗವಾಗಿರುವುದು ಭಾರತವನ್ನು ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದ ಮತದಾರ ಬಂಧುಗಳ ರಾಷ್ಟ್ರ ವಿಜಯವನ್ನು ಸಂಕೇತಿಸಿದೆ.ಇಂತಹದೇ ಫಲಿತಾಂಶ ಬರಲಿದೆ ಎಂಬುವುದು ದೇಶದ ಜನರಿಗೆ ಗೊತ್ತಿರುವ ಸತ್ಯ , ಈ ಭಾರಿ 370 ಕ್ಕೂ ಮೀರಿ ಸ್ಥಾನ ಪಡೆಯಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಎನ್ , ಮುಖಂಡರಾದ ಎಂ ಬಿ ಮಂಜುನಾಥ್ ,ಪಿ ರಮೇಶ್ , ಸುರೇಶ್ ಸಿಂಗ್ ,ಎ ಟಿ ನಾಗರತ್ನ , ಸುಂದರೇಶ್ , ಸುಧೀಂದ್ರ ಪೂಜಾರಿ , ಲೀಲಾ ಶಂಕರ್ ,ದೇವೆಂದ್ರಪ್ಪ , ಅರುಣ್ , ಸುಧೀರ್ , ಮಂಜುಳಾ ಕೆ ರಾವ್ , ಮುರಳಿ ಹಾಗೂ ಇನ್ನಿತರರಿದ್ದರು.
 
                         
                         
                         
                         
                         
                         
                         
                         
                         
                        




