ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ತಳಲೆ ತಲೆಕಟ್ಟಿನ ಕೆರೆಗೆ ಮರುಜೀವ | ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯ ಜವಬ್ದಾರಿ – ಗಣಪತಿ ಭಟ್ | Lake development

ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ತಳಲೆ ತಲೆಕಟ್ಟಿನ ಕೆರೆಗೆ ಮರುಜೀವ | ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯ ಜವಬ್ದಾರಿ – ಗಣಪತಿ ಭಟ್


ರಿಪ್ಪನ್‌ಪೇಟೆ : ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯ ಜವಾಬ್ದಾರಿ, ಕೆರೆ ಸಂರಕ್ಷಣೆಯಿಂದ ಭೂಮಿಯ ಮೇಲಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಮನುಷ್ಯರಿಗೂ ಅನುಕೂಲಕರವಾಗಿದ್ದು, ಮುಂದಿನ ಜನಾಂಗದ ಪೀಳಿಗೆಗೆ ಅದನ್ನು ಸಂರಕ್ಷಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಅಭಿಯಂತರರಾದ ಗಣಪತಿ ರವರು ಹೇಳಿದರು.


ಪಟ್ಟಣದ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದ ತಲೆಕಟ್ಟಿನ ಕೆರೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ “ನಮ್ಮೂರು ನಮ್ಮ ಕೆರೆ” ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ 560 ಕೆರೆಗಳ ಕಾಮಗಾರಿ ನೆರವೇರಿಸಿದ್ದಾರೆ. ಇದು ಅವರ ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಿದ ಕಾರ್ಯಕ್ರಮವಾಗಿದೆ.


ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ಅವುಗಳಲ್ಲಿ ಬಹುತೇಕ ಕೆರೆಗಳು ಹೂಳು ಮತ್ತು ಒತ್ತುವರಿಯ ಕಾರಣ ಹಾಳಾಗಿವೆ. ಧರ್ಮಸ್ಥಳ ಸಂಸ್ಥೆಯು ರಾಜ್ಯದಲ್ಲಿ ಒಟ್ಟು 367 ಕೆರೆಗಳನ್ನು ಪುನಶ್ಚೇತನಗೊಳಿಸಿದ ನಂತರ, ಅಂತರ್ಜಲ ಮಟ್ಟ ಹೆಚ್ಚಾಗಿದೆಯಲ್ಲದೆ, ಕೆರೆ ಒತ್ತುವರಿ ಪ್ರಕರಣಗಳು ಬಹಳಷ್ಟು ತಗ್ಗಿವೆ.

‘ನೀರಾವರಿ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಆದರೆ, ಊರಿನ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅನುದಾನವಿರದಿದ್ದರೆ ಇಂತಹ ಕೆರೆಗಳ ಅಭಿವೃದ್ಧಿ ಆಗುವುದೇ ಇಲ್ಲ. ಈ ಕಾರಣ, ಗ್ರಾಮ ಪಂಚಾಯಿತಿಗಳ ಜೊತೆಗೆ ಕೈಜೋಡಿಸಿರುವ ನಾವು ಊರ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ’ ಎಂದು ತಿಳಿಸಿದರು.


‘ಕೆರೆಗಳ ಹೂಳು ಎತ್ತುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡಿದರೆ, ಅದನ್ನು ಸಾಗಿಸುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ. ಧರ್ಮಸ್ಥಳ ಸಂಸ್ಥೆ, ಸ್ಥಳೀಯರ ನೆರವಿನಿಂದ ಸಣ್ಣ ಕೆರೆಗಳನ್ನು, ಸರ್ಕಾರದ ಸಹಭಾಗಿತ್ವದೊಂದಿಗೆ ಕೆರೆ ಸಂಜೀವಿನಿ ಯೋಜನೆಯಡಿ ದೊಡ್ಡ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದೆ’ ಎಂದರು.

ಕೆರೆ ಸಮಿತಿ ಅಧ್ಯಕ್ಷ ಕಗ್ಗಲಿ ಲಿಂಗಪ್ಪ ಮಾತನಾಡಿ  ಕೆರೆಕಟ್ಟೆಗಳು ನಾಡಿನ ಜೀವನಾಡಿ. ರೈತಾಪಿ ಜನರ ಉಸಿರು. ಇವನ್ನು ಈಗಂತೂ ನಿರ್ಮಿಸಲು ಆಗದು. ಹಾಗಾಗಿ ಇರುವುದನ್ನು ಉಳಿಸಿಕೊಳ್ಳಲೇಬೇಕು. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆಯ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಿ ಊರಿನವರಿಗೆ ವರ್ಗಾಯಿಸುವ ಮೂಲಕ ಕೆರೆಯ ಮಹತ್ವ, ಅಗತ್ಯತೆ, ಕೆರೆ ಸಂರಕ್ಷಣೆಯ ಕುರಿತ ಜಾಗೃತಿಯನ್ನು ಮೂಡಿಸುವ ಅಪೂರ್ವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದರು.

ಈ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯೆ ಗೌರಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಶಶಿಧರ್ ,ರಂಜಿತ್ ಕುಮಾರ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *