ರಿಪ್ಪನ್ಪೇಟೆಯಲ್ಲಿ ಭೂ ದಲ್ಲಾಳಿಗಳಿಂದ ಲೇಔಟ್ ಮಾಫಿಯ : ಗ್ರಾಪಂ ಸದಸ್ಯನಿಂದಲೇ ಗಂಭೀರ ಆರೋಪ
ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಲೇಔಟ್ ನಿರ್ಮಾಣವಾಗುತಿದ್ದು ಈ ಮಾಫಿಯಾದಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪಟ್ಟಣದ ಗ್ರಾಪಂ ಹಿರಿಯ ಸದಸ್ಯ ಜಿ ಡಿ ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಗ್ರಾಪಂ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಿಪ್ಪನ್ ಪೇಟೆ ಪಟ್ಟಣವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಬೆಳೆಯುತ್ತಿರುವುದರಿಂದ ನಗರ ಭಾಗದಲ್ಲಿ ಮಾತ್ರ ಇದ್ದಂತಹ ಲೇಔಟ್ ಸಂಪ್ರದಾಯ ಈಗ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ತಲೆ ಎತ್ತುತ್ತಿವೆ, ಲೇಔಟ್ ಮಾಫಿಯಾ ದೊರೆಗಳು ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಸೃಷ್ಟಿಸಿಕೊಳ್ಳುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಗವಟೂರು ಗ್ರಾಮದ ಸರ್ವೆ ನಂಬರ್ 361/2 ರಲ್ಲಿನ 1.09 ಎಕರೆ ಜಾಗವನ್ನು ಲೇಔಟ್ ನಿರ್ಮಾಣದ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಲಾಗಿದೆ . ಈ ಭೂಪರಿವರ್ತನೆಗಾಗಿ ನಿಯಮ ಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಈ ಲೇಔಟ್ ಗೆ ಸಂಬಂಧಿಸಿದ ದಾಖಲೆಗಳು ಗ್ರಾಪಂ ಕಡತದಲ್ಲಿ ಒಂದು ರೀತಿ ಇದ್ದರೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಬೇರೆಯ ತರಹ ಇರುತ್ತದೆ.ಕೆಲವೊಮ್ಮೆ ಅಲ್ಲಿದ್ದ ದಾಖಲೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗುವುದೇ ಇಲ್ಲ.ಇನ್ನೂ ಮುಂದುವರಿದು ಗ್ರಾಪಂ ಅಭಿವೃದ್ಧಿ ಅಧಿಕಾರಿಯ ಸಹಿಯು ದುರ್ಬಳಕೆಯಾಗಿರುವ ಸಂಶಯವಿದೆ ಎಂದರು.
ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗಿ ಅನುಮೋದನೆಗೋಳ್ಳುವ ಮುಂಚಿತವಾಗಿಯೇ ಸದಸ್ಯರುಗಳ ಸಹಿಗಳನ್ನು ಪಡೆದುಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಮಾಡಿಕೊಳ್ಳುತ್ತಾರೆ ಎಂದು ಗ್ರಾಮಾಡಳಿತದ ವಿರುದ್ದ ನೇರ ಆರೋಪ ಮಾಡಿದರು.
ಲೇಔಟ್ ಭೂ ಪರಿವರ್ತನೆಗೆ ಸಂಬಂಧಿಸಿದ ರಸ್ತೆಯ ಬಗ್ಗೆ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಮುಖೇನ ಎಷ್ಟು ಅಡಿ ಅಗಲದ ರಸ್ತೆ ಇದೆ ಎಂದು ಪ್ರಶ್ನಿಸಿದಾಗ 13/2/24 ರಲ್ಲಿ 22 ಅಡಿ ರಸ್ತೆ ಎಂದು ತಿಳಿಸಿದ್ದರು, ಆದರೆ ನಗರಾಭಿವೃದ್ಧಿ ಇಲಾಖೆಯ ಪರಿಶೀಲನ ಪಟ್ಟಿಯ 9ನೇ ಕಾಲಂ ನಲ್ಲಿ 30 ಅಡಿ ಅಗಲದ ರಸ್ತೆ ಇದೆ ಎಂದು ಗ್ರಾ ಪಂ ನಿರಾಪೇಕ್ಷಣ ಪತ್ರದಲ್ಲಿ ಉಲ್ಲೇಖವಾಗಿದೆ. ಗ್ರಾಮ ಪಂಚಾಯಿತಿಯಲ್ಲಿರುವ ದಾಖಲೆಗಳಿಗೂ ನಗರ ಮತ್ತು ಗ್ರಾಮಾಂತರ ಇಲಾಖೆಯ ದಾಖಲೆಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು ನಕಲಿ ದಾಖಲೆ ಸೃಷ್ಟಿಸಿರುವ ಶಂಕೆ ವ್ಯಕ್ತವಾಗುತ್ತಿದೆ.ಈ ಬಗ್ಗೆ ಉನ್ನತ ಮಟ್ಟದಲ್ಲಿ ಸೂಕ್ತ ತನಿಖೆ ಆಗಬೇಕು ಸಂಬಂಧಪಟ್ಟ ಇಲಾಖೆಗಳು ತಮ್ಮಲ್ಲಿರುವ ದಾಖಲೆಗಳ ಸತ್ಯಾಸತ್ಯತೆ ಸೂಕ್ತ ತನಿಖೆ ಮೂಲಕ ತಿಳಿದುಕೊಳ್ಳಬೇಕು ಆಗ್ರಹಿಸಿದರು.
ಹೊಸ ಲೇಔಟ್ ನಿರ್ಮಿಸುವ ವೇಳೆ ಪ್ರಾಧಿಕಾರದ ನಿಯಮದಂತೆ ಅಗಲವಾದ ರಸ್ತೆ ಸೇರಿ ಅಗತ್ಯ ಮಾನದಂಡಗಳ ಅನುಸರಿಸಿ ತಾಂತ್ರಿಕವಾಗಿ ಬಡಾವಣೆ ಅಭಿವೃದ್ಧಿಪಡಿಸಿದಲ್ಲಿ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ ಎಂದು ಈ ಸಂಧರ್ಭದಲ್ಲಿ ಹೇಳಿದರು.
ಒಟ್ಟಾರೆಯಾಗಿ ರಿಪ್ಪನ್ಪೇಟೆ ಗ್ರಾಪಂ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಲೇಔಟ್ ತಲೆ ಎತ್ತಿದ್ದು ಲೇಔಟ್ ಗಳಲ್ಲಿ ನಿವೇಶನ ಪಡೆದುಕೊಂಡವರ ಕೆಲವೊಂದು ದಾಖಲೆ ಪತ್ರಗಳು ಸಮಸ್ಯೆಯಾಗಿದ್ದರೆ, ಇನ್ನೂ ತೀರ್ಥಹಳ್ಳಿ ರಸ್ತೆಯ ಲೇಔಟ್ ವೊಂದರಲ್ಲಿ ಲಕ್ಷಾಂತರ ರೂ ವ್ಯಯಿಸಿ ನಿವೇಶನ ಕೊಂಡ ಮನೆ ಕಟ್ಟಿಕೊಂಡವರಿಗೆ ಓಡಾಡಲು ರಸ್ತೆಗಳೇ ಇಲ್ಲದೇ ಪರದಾಡುವಂತಾಗಿ ಸಂಬಂದಪಟ್ಟವರಿಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೇ ಇತ್ತೀಚೆಗೆ ರಿಪ್ಪನ್ಪೇಟೆಯಲ್ಲಿ ನಡೆದ ಶಾಸಕರ ಜನತಾ ದರ್ಶನದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು ತಕ್ಷಣ ತಹಶೀಲ್ದಾರರಿಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು.