Ripponpete | ಸಮಯ ಪ್ರಜ್ಞೆ ಮೆರೆದ ಪೊಲೀಸರು – ತಪ್ಪಿದ ಭಾರಿ ಅಗ್ನಿ ಅವಘಡ
ರಿಪ್ಪನ್ಪೇಟೆ : ಪಟ್ಟಣದ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರಿ ಅಗ್ನಿ ಅವಘಡ ಸಂಭವಿಸಿ ಮುಂದಾಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿರುವ ಘಟನೆ ನಡೆದಿದೆ.
ಹೌದು ಭಾನುವಾರ ಪಟ್ಟಣದ ಬೆಳಕೋಡು ಗ್ರಾಮದಲ್ಲಿ ಗಸ್ತು ತಿರುಗುತಿದ್ದ ಪಟ್ಟಣದ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿಗಳ ತಂಡಕ್ಕೆ ಜಗದೀಶ್ ಎಂಬುವವರ ಮನೆ ಪಕ್ಕದ ಹುಲ್ಲಿನ ಗೊಣಬೆಗೆ ಬೆಂಕಿ ತಗುಲಿರುವುದು ಕಂಡುಬಂದಿದೆ.ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆಂಕಿ ಆರಿಸುವ ಕೆಲಸಕ್ಕೆ ಮುಂದಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಅಷ್ಟೊತ್ತಿಗಾಗಲೇ ತೋಟದಲ್ಲಿ ಕೆಲಸ ಮಾಡುತಿದ್ದ ಮನೆಯವರು ಕೂಡ ಓಡಿಬಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಬೆಳಕೋಡು ಗ್ರಾಮದ ಜಗದೀಶ್ ಮನೆಯಲ್ಲಿ ಎಲ್ಲಾರೂ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಇಬ್ಬರು ಮಕ್ಕಳು ಬೆಂಕಿ ಪೊಟ್ಟಣದಲ್ಲಿ ಆಟವಾಡುತ್ತಿರುವಾಗ ಹುಲ್ಲಿನ ಗೊಣಬೆಗೆ ಬೆಂಕಿ ತಗುಲಿದೆ ಇದರಿಂದ ಬೆದರಿದ ಮಕ್ಕಳು ಮನೆಯ ಒಳಗೆ ಹೋಗಿ ಅವಿತು ಕುಳಿತಿದ್ದಾರೆ. ಮನೆಯ ಪಕ್ಕದಲ್ಲಿಯೇ ಇದ್ದ ಹುಲ್ಲಿನ ಗೊಣಬೆಯ ಬೆಂಕಿ ಮನೆಗೆ ಆವರಿಸಿದ್ದರೆ ದೊಡ್ಡ ಅನಾಹುತವೆ ನಡೆಯುತಿತ್ತು.
ಅದೃಷ್ಟವಶಾತ್ ಈ ಸಂಧರ್ಭದಲ್ಲಿ ಅದೇ ಮಾರ್ಗದಲ್ಲಿ ಗಸ್ತು ತಿರುಗುತಿದ್ದ ಪಟ್ಟಣದ ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಮನೆಗೆ ಬೆಂಕಿ ಆವರಿಸುವುದು ತಪ್ಪಿದಂತಾಗಿದೆ.ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.ಈ ಘಟನೆಯಲ್ಲಿ ರೈತ ಜಗದೀಶ್ ಗೆ ಸೇರಿದ 35 ಸಾವಿರ ರೂ ಮೌಲ್ಯದ. 450 ಪಿಂಡಿ ಹುಲ್ಲು ಬೆಂಕಿಗೆ ಅಹುತಿಯಾಗಿದೆ.
ಒಟ್ಟಾರೆಯಾಗಿ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಕೈ ತಪ್ಪಿದ್ದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸರ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸೋಮಶೇಖರ್ , ಮಂಜುನಾಥ್ , ನವೀನ್ ಹಾಗೂ ಮಧುಸೂಧನ್ ಇದ್ದರು.
 
                         
                         
                         
                         
                         
                         
                         
                         
                         
                        

