Ripponpete | 40 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೀರ ಯೋಧನಿಗೆ ಆರಗ ಜ್ಞಾನೇಂದ್ರ ರವರಿಂದ ಸನ್ಮಾನ
ರಿಪ್ಪನ್‌ಪೇಟೆ : ಕಳೆದ 40 ವರ್ಷಗಳ ಕಾಲ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸಿ ಇದೀಗ ಸೇವೆಯಿಂದ ನಿವೃತ್ತಿ ಹೊಂದಿ ತನ್ನ ತವರೂರಿಗೆ ಬಂದಿರುವ ಕಲ್ಲೂರು ಗ್ರಾಮದ ಬೂದ್ಯಪ್ಪ ಗೌಡರವರಿಗೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಸನ್ಮಾನಿಸಿ ಗೌರವಿಸಿದರು.
ಇಂದು ಕಲ್ಲೂರಿನ ವೀರ ಯೋಧ ಬೂದ್ಯಪ್ಪ ಗೌಡರವರ ನಿವಾಸಕ್ಕೆ ತೆರಳಿದ 40 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿರುವ ಅನನ್ಯ ಸೇವೆಗಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಬೂದ್ಯಪ್ಪ ಗೌಡ ಹೆತ್ತ ತಾಯಿ ಹಾಗೂ ಜನ್ಮ ಪಡೆದ ದೇಶದ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಬರೀ ಅವರ ಸೇವೆಯನ್ನಷ್ಟೆ ನಾವು ಮಾಡಬಹುದು. ನಾನು ಕಳೆದ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಗ್ರಾಮಸ್ಥರು ನೀಡಿದ ಸ್ವಾಗತ ಹೃದಯ ತುಂಬಿದೆ. ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಇಷ್ಟು ವರ್ಷ ಗಡಿಯಲ್ಲಿ ದೇಶ ಸೇವೆ ಮಾಡಿದ್ದೇನೆ. ಈಗ ಊರಲ್ಲಿ ಜಮೀನಿನಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತೇನೆ. ಗಡಿ ಸೇವೆಯ ಬಳಿಕ ಭೂತಾಯಿ ಸೇವೆಗೆ ಅಣಿಯಾಗಲಿದ್ದೇನೆ ಎಂದರು.
ವೀರ ಯೋಧನಿಗೆ ಅದ್ದೂರಿ ಸ್ವಾಗತ
ಕಳೆದ 40 ವರ್ಷಗಳ ಕಾಲ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ.ಇತ್ತೀಚಿಗೆ ಸೇವೆಯಿಂದ ನಿವೃತ್ತಿ ಹೊಂದಿ ತನ್ನ ತವರೂರಿಗೆ ಬಂದಿದ್ದೆ ಬಂತು. ಆ ಸಂಭ್ರಮ ಬರೀ ಆತನ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಆ ಇಡೀ ಊರಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿತ್ತು.
ದೇಶದ ಗಡಿಯಲ್ಲಿ ಹಗಲು ರಾತ್ರಿ ಎನ್ನದೇ ಸೇವೆ ಸಲ್ಲಿಸಿ ಬಂದಿರುವ ಯೋಧನಿಗೆ ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಅಂದು ಬೆಳಿಗ್ಗೆ ರಿಪ್ಪನ್‌ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ಹೂಮಾಲೆ ಹಾಕಿ ಬರಮಾಡಿಕೊಂಡ ಗ್ರಾಮಸ್ಥರು ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿನಾಯಕ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಿದ್ದರು.
ಮಾರ್ಗ ಮಧ್ಯದಲ್ಲಿ ಅನೇಕ ಯುವಕರು ಯೋಧನಿಗೆ ಹೂಮಾಲೆ ಹಾಕಿ ಅವರಿಗೆ ಗೌರವದ ವಂದನೆ ಸಲ್ಲಿಸುತ್ತಿದ್ದರು. ಇನ್ನು ಅನೇಕ ಮಹಿಳೆಯರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಯೋಧನ ಕೈಗೆ ಕೊಟ್ಟು ಹರ್ಷ ಪಡುತ್ತಿದ್ದರು. ನಂತರ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಭವ್ಯ ಸ್ವಾಗತ ಮಾಡುವುದರೊಂದಿಗೆ ನಿವೃತ್ತಿ ಜೀವನಕ್ಕೆ ಶುಭಕೋರಿದರು.