Ripponpete | ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತ್ಯಗತ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ
ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಪೊಲೀಸ್ ಕಾನೂನು, ರಸ್ತೆ ಸುರಕ್ಷ ತೆ ಮುಂತಾದ ನಿಯಮಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯ ಕಾನೂನು, ನಿಯಮಗಳ ಬಗ್ಗೆ ಅರಿವು ಹೊಂದಿ ಪೋಷಕರು ಹಾಗೂ ಸಾರ್ವಜನಿಕರನ್ನು ಜಾಗೃತಿಗೊಳಿಸುವಷ್ಟು ಪ್ರಬುದ್ಧರಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ಪೊಲೀಸ್ ಕಾನೂನು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ, ರಸ್ತೆ ಸುರಕ್ಷ ತೆಯ ಕಾನೂನು ನಿಯಮಗಳು, ಮೋಟಾರು ಕಾಯಿದೆ ನಿಯಮಗಳ ಬಗ್ಗೆ ಅರಿತುಕೊಂಡರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಸೇರಿದಂತೆ 18 ವರ್ಷದೊಳಗಿನ ಮಕ್ಕಳು ಯಾವುದೇ ವಾಹನವನ್ನು ಓಡಿಸುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ, ಪ್ರತಿ ವಾಹನ ಸವಾರರು ಕಡ್ಡಾಯವಾಗಿ ಡಿಎಲ್ ಮಾಡಿಸಿಕೊಂಡು ಓಡಿಸಬೇಕು, ದ್ವಿಚಕ್ರ ವಾಹನ ಸೇರಿದಂತೆ ಪ್ರತಿ ವಾಹನಗಳಿಗೆ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಿಕೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ಮೃತಪಟ್ಟರೆ ಹಾಗೂ ಗಾಯಗೊಂಡಲ್ಲಿ ವಿಮೆಯ ಮೂಲಕ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಾಹನಗಳಿಗೆ ಡಿಎಲ್ ಮತ್ತು ವಾಹನ ವಿಮೆ ನೋಂದಣಿ ಮಾಡಿಸಿಕೊಳ್ಳುತ್ತಿರಬೇಕು. ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರಿಬ್ಬರೂ ಕಡ್ಡಾಯವಾಗಿ ಹೆಲ್ಮೆಂಟ್ ಧರಿಸಬೇಕು ಎಂದರು.
ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪೊಕ್ಸೊ ಕಾಯಿದೆ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷ ಣೆ, ಮತ್ತು ಪೋಷಣೆ ಮಾಡುವ ನಿಟ್ಟಿನಲ್ಲಿ ಪೋಷಕರು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಿಂದ “ಅಪರಾಧ ತಡೆಯಲ್ಲಿ ಯುವ ಸಮುದಾಯದ ಪಾತ್ರ” ಎಂಬ ವಿಷಯದಡಿಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಿ ಆರ್ ಗೋಪಾಲಕೃಷ್ಣ ,ಸದಸ್ಯರಾದ ರಫ಼ಿ ರಿಪ್ಪನ್‌ಪೇಟೆ , ಲೇಖನ ಚಂದ್ರನಾಯ್ಕ್ , ಬೋರಪ್ಪ , ಷಣ್ಮುಖ , ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಇದ್ದರು.