ರಿಪ್ಪನ್ಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ – ಅಡಿಕೆ,ರಬ್ಬರ್ ಕಳ್ಳರ ಬಂಧನ
ರಿಪ್ಪನ್ಪೇಟೆ : ಪಟ್ಟಣದ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಒಣಗಿಸಿಡುತಿದ್ದ ಅಡಿಕೆ,ರಬ್ಬರ್ ಕಳ್ಳತನ ಮಾಡುತಿದ್ದ ಕಳ್ಳರ ಜಾಲವೊಂದನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಮಾಲು ಹಾಗೂ ವಾಹನ ಸಮೇತ ಬಂಧಿಸಿದ್ದಾರೆ.
ಆರೋಪಿಗಳಾದ ರಾಘವೇಂದ್ರ @ರಾಘು ಹರತಾಳು, ಶ್ರೀಧರ್ ನಂಜವಳ್ಳಿ ರವರನ್ನು ಬಂಧಿಸಲಾಗಿದೆ.
ಇನ್ನುಳಿದ ಆರೋಪಿಗಳಾದ ಪ್ರವೀಣ್ ಶಿವಪುರ , ನಾಗಭೂಷಣ್@ನಾಗ ಶಿವಪುರ ಮತ್ತು ಪ್ರತಾಪ್ ಪರಾರಿಯಾಗಿದ್ದಾರೆ.
ಇತ್ತೀಚೆಗೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಂದೂರು ಗ್ರಾಮದ ವೀರೇಶ್ ಎಂಬುವವರ ಮನೆಯಲ್ಲಿ ಒಣಗಿಸಿದ್ದ 105 ರಬ್ಬರ್ ಶೀಟ್ ಹಾಗೂ ಕ್ವಾಡ್ರಿಗಿ ಗ್ರಾಮದ ಬಾಲರಾಜ್ ಎಂಬುವವರ ಮನೆಯಲ್ಲಿ ಒಣಗಿಸಿಟ್ಟಿದ್ದ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕಳ್ಳತನವಾಗಿತ್ತು.ಈ ಹಿನ್ನಲೆಯಲ್ಲಿ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಲೆನಾಡ ಪ್ರದೇಶದಲ್ಲಿ ಕಂಟಕಪ್ರಾಯವಾಗಿ ಇಂತಹ ಕಳ್ಳತನ ಪ್ರಕರಣವನ್ನು ಕೈಗೆತ್ತಿಕೊಂಡ ಪಿಎಸ್ಐ ಪ್ರವೀಣ್ ಎಸ್ ಪಿ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಹಾಗೂ 50 ಸಾವಿರಕ್ಕೂ ಹೆಚ್ಚು ಮೌಲ್ಯದ ರಬ್ಬರ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಉಮೇಶ್ , ಸಂತೋಷ್ ಕೊರವರ , ಮಧುಸೂಧನ್ , ರಾಮಚಂದ್ರ ,ಮಂಜುನಾಥ್ ,ಪ್ರೇಮ್ ಕುಮಾರ್ ಹಾಗೂ ಶಿವಮೊಗ್ಗ ANC ತಂಡದ ಇಂದ್ರೇಶ್ ,ಗುರುರಾಜ್ ಮತ್ತು ವಿಜಯ್ ಪಾಲ್ಗೊಂಡಿದ್ದರು.
ಒಟ್ಟಾರೆಯಾಗಿ ರಿಪ್ಪನ್ಪೇಟೆ ಸುತ್ತಮುತ್ತಲಿನ ಭಾಗದಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಕಂಟಕಪ್ರಾಯವಾಗಿದ್ದ ಈ ಕಳ್ಳರ ಜಾಲವನ್ನು ಪತ್ತೆ ಹಚ್ಚಿದ ಪಟ್ಟಣದ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ತಂಡಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.