ಸಾಗರ : ತಾಲ್ಲೂಕಿನ ಇರುವಕ್ಕಿ ಆಸುಪಾಸು ಹೊಸ ಕಲ್ಲುಕ್ವಾರೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇರುವಕ್ಕಿ ಗ್ರಾಮದ ಸ.ನಂ. 30 ಮತ್ತು 31ರಲ್ಲಿ ಹೊಸ ಕಲ್ಲುಕ್ವಾರೆ ಪ್ರಾರಂಭಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಲ್ಲುಕ್ವಾರೆಗೆ ಪ್ರಸ್ತಾಪಿಸಿರುವ ಜಾಗದ ವ್ಯಾಪ್ತಿಯಲ್ಲಿಯೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಬರುತ್ತದೆ. ಶರಾವತಿ ನದಿಯ ಉಪನದಿಯ ದಂಡೆ ಇದಾಗಿದ್ದು, ಕೃಷಿಗೆ ನೀರು ಪೂರೈಕೆ ಈ ಉಪ ನದಿಯಿಂದ ಆಗುತ್ತಿರುತ್ತದೆ. ಇಂತಹ ಜಾಗದ 500 ಮೀಟರ್ ಅಂತರದಲ್ಲಿ ಮನೆ, ಕೃಷಿ ಜಮೀನು, ತೋಟ ಇರುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಜಾಗದಲ್ಲಿ ಕಲ್ಲುಕ್ವಾರೆ ಮಾಡಿದರೆ ಪರಿಸರ ನಾಶದ ಜೊತೆಗೆ ನೀರು ಮಲೀನವಾಗುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಸಹ ವಾಯು ಮಾಲಿನ್ಯದಿಂದ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಹೊಸದಾಗಿ ಕಲ್ಲುಕ್ವಾರೆ ಮಾಡಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರಾಮಸ್ಥರಾದ ಮೇಘರಾಜ ಎಸ್., ಮೆಡಿಕಲ್ ಮಂಜುನಾಥ್, ಜಗದೀಶ್, ಪ್ರಶಾಂತ್, ಸತೀಶ್, ಲೋಕೇಶ್, ಗಣಪತಿ, ಜ್ಞಾನೇಶ್, ಸೋಮಶೇಖರ್, ಸಂತೋಷ್ ಇನ್ನಿತರರು ಹಾಜರಿದ್ದರು.