ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಯಲ್ಲಿ ಇರುವ ಡಿಜಿಟಲ್ ಫಲಕಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಸರ್ಕಾರ ಕನ್ನಡ ಡಿಜಿಟಲ್ ಫಲಕ ಅಳವಡಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿ ಫಲಕ ಇರುವುದನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಚಿವ ಎಂಬಿ ಪಾಟೀಲ್ ಗಮನಕ್ಕೆ ತಂದಿದ್ದರು.
“ಇದು ಯಾವುದೋ ಹಿಂದಿ ರಾಜ್ಯವಲ್ಲ ಇದು ಕರ್ನಾಟಕ.. ಇಲ್ಲಿ ಹಿಂದಿ ಅವಶ್ಯಕತೆ ಇಲ್ಲ. ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ. ಕರ್ನಾಟಕ ಸರ್ಕಾರವೇ ನಿರ್ವಹಿಸಲಿರುವ ನಾಳೆಯಿಂದ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸೇವೆಗಳು ಪ್ರಾರಂಭವಾಗುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಮಯ” ಎಂದು ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ ಅವರು, “ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವೆ” ಎಂದು ಭರವಸೆ ನೀಡಿದ್ದರು.
ಇದೀಗ, ಡಿಜಿಟಲ್ ಫಲಕವನ್ನು ಕನ್ನಡಕ್ಕೆ ಬದಲಿಸಲಾಗಿದ್ದು, ಈ ಕುರಿತು ಮಾಹಿತಿಯನ್ನು ಎಂಬಿ ಪಾಟೀಲ್ ಅವರು ಹಂಚಿಕೊಂಡಿದ್ದಾರೆ. “ಕನ್ನಡವೇ ಸತ್ಯ-ಕನ್ನಡವೇ ನಿತ್ಯ! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಮಾಹಿತಿ ಫಲಕ. ನೆಲ-ಜಲ-ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ ” ಎಂದು ಎಂಬಿ ಪಾಟೀಲ್ ಅವರು ಟ್ವೀಟ್ ಮಾಡಿದ್ದಾರೆ.