ನೊಂದವರ ಪರ ಧ್ವನಿ ಎತ್ತಿ ಅವರಿಗೆ ಸಹಕಾರ ನೀಡಿದ ಕಾರ್ಯಗಳೇ ನನ್ನ ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ನೀಡುವ ಕ್ಷಣಗಳಾಗಿದ್ದು ಆ ನಿಟ್ಟಿನಲ್ಲಿ ಬಡ,ನಿರ್ಗತಿಕರ ಧ್ವನಿಯಾಗಿ ಕಾರ್ಯ ನಿರ್ವಹಿಸುತಿದ್ದೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಹೊಸನಗರ ತಾಲೂಕಿನ ಮೇಲಿನಸಂಪಳ್ಳಿ ಗ್ರಾಮದ ಬಡ ಮಹಿಳೆಗೆ ಮಾರುತಿಪುರ ಗ್ರಾಪಂ ಆಶ್ರಯದಲ್ಲಿ ಆಸರೆ ಸಮಿತಿ ನಿರ್ಮಿಸಿಕೊಡುತ್ತಿರುವ ಮನೆಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ಕಳೆದ ಆರು ವರ್ಷಗಳಿಂದ ಮಹಿಳೆ ತನ್ನ ವಿಕಲಚೇತನ ಮಗಳೊಂದಿಗೆ ನರಕಯಾತನೆ ಅನುಭವಿಸುವಿರುವುದನ್ನು ಸಂಬಂಧಪಟ್ಟವರು ಗಮನಿಸದೇ ಇರುವುದು ದುರದೃಷ್ಟಕರವಾಗಿದೆ, ನನ್ನ ಕ್ಷೇತ್ರದಲ್ಲಿ ಈ ತರಹದ ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದರು.
ಇತ್ತೀಚಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಾಗೂ ಇನ್ನಿತರ ಮಾದ್ಯಮಗಳು ಈ ಬಗ್ಗೆ ಸವಿಸ್ತಾರವಾದ ವರದಿ ಮಾಡಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಣ್ತೆರೆಸುವ ಮೂಲಕ ಆ ಬಡ ಮಹಿಳೆಯ ಬಾಳಿನಲ್ಲಿ ಬೆಳಕು ತಂದಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿಷ್ಟೆಯಿಂದ ಮಾಡಬೇಕಾಗಿದೆ,ಇಂತಹ ಬಡ ಮಹಿಳೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದ ಮಾದ್ಯಮ ಮಿತ್ರರ ಹೆಚ್ಚಿನ ಕಾಳಜಿಯಿಂದ ಬಡ ಮಹಿಳೆಗೆ ಹೊಸ ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದರು.
ಆಸರೆ ಸಮಿತಿ ಅಧ್ಯಕ್ಷ ಗ್ರಾಪಂ ಸದಸ್ಯ ಚಿದಂಬರಂ ಮಾತನಾಡಿ ಮಹಿಳೆಗೆ ಸುಸಜ್ಜಿತವಾದ ಮನೆ ನಿರ್ಮಿಸಿಕೊಡಲಾಗುವುದು ಆ ಹಿನ್ನಲೆಯಲ್ಲಿ ಹಲವಾರು ದಾನಿಗಳು ದೇಣಿಗೆ ಕೊಡಲು ಮುಂದೆ ಬಂದಿದ್ದು ಅತೀ ಶೀಘ್ರದಲ್ಲಿ ಮನೆ ನಿರ್ಮಾಣವಾಗಲಿದೆ.ಯಾರಾದರೂ ದಾನಿಗಳು ದೇಣಿಗೆ ನೀಡಲು ಬಯಸಿದ್ದಲ್ಲಿ ಮಾರುತಿಪುರ ಗ್ರಾಪಂ ಕಛೇರಿಯನ್ನು ಸಂಪರ್ಕಿಬಹುದು ಎಂದರು.
ಇದೇ ಸಂಧರ್ಭದಲ್ಲಿ ಆಸರೆ ಸಮಿತಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ವೈಯಕ್ತಿಕವಾಗಿ 50 ಸಾವಿರ ನೆರವು ನೀಡಿದರು.
ಈ ಸಂಧರ್ಭದಲ್ಲಿ ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪಿಕಾ ಕೆ ಆರ್ ,ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್, ತಾಲೂಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ನಾಗರಾಜ್ ,ಮುಖಂಡರಾದ ಬಿ ಜಿ ಚಂದ್ರಮೌಳಿ ,ಮಾಸ್ತಿಕಟ್ಟೆ ಸುಬ್ರಹ್ಮಣ್ಯ ,ಗ್ರಾಪಂ ಸದಸ್ಯ ಅವಿನಾಶ್ ಸೇರಿದಂತೆ ಇನ್ನಿತರರಿದ್ದರು.
		 
                         
                         
                         
                         
                         
                         
                         
                         
                         
                        



