ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ: ಬೇಳೂರು
ರಿಪ್ಪನ್ಪೇಟೆ : ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಪ್ರಬಲ ಇಚ್ಚಾಶಕ್ತಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಆರ್ಥಿಕ ಅನುದಾನ ಮತ್ತು ನೆರವನ್ನು ಸರ್ಕಾರ ನೀಡುತ್ತದೆ. ತನ್ಮೂಲಕ ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ, ಪ್ರಗತಿ ಮತ್ತು ಸಬಲೀಕರಣ ಸಾಧ್ಯವಾಗುತ್ತದೆ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಟ್ರೇಡರ್ಸ್ ಮತ್ತು ಅರ್ಥ್ ಮೂವರ್ಸ್ ನೂತನ ಉದ್ಯಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಿಗುವ ಕಚ್ಛಾವಸ್ತುಗಳನ್ನು ಬಳಸಿ ಕಿರು ಉದ್ದಿಮೆಗಳನ್ನು ಪ್ರಾರಂಭಿಸಬೇಕು. ಇದಕ್ಕೆ ಬೇಕಾದ ಕೌಶಲ ಅಭಿವೃದ್ಧಿಗಾಗಿ ಸರ್ಕಾರ ತರಬೇತಿ ನೀಡುತ್ತದೆ. ಯುವಜನತೆ ನೌಕರಿ ಬೇಟೆಯಲ್ಲಿ ತೊಡಗದೆ ಸ್ವಂತ ಉದ್ದಿಮೆ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿ ನೂತನ ಉದ್ಯಮಕ್ಕೆ ಶುಭ ಕೋರಿದರು.
ಶ್ರೀ ದುರ್ಗಾಪರಮೇಶ್ವರಿ ಟ್ರೇಡರ್ಸ್ ಮಾಲೀಕರಾದ ರಮೇಶ್ ವೈ ಬಿ ಮಾತನಾಡಿ ಗ್ರಾಹಕರಿಗೆ ಬೇಕಾದ ಸೈಜ್ ನಲ್ಲಿ ಹೋಲ್ಸೇಲ್ ದರದಲ್ಲಿ ಎಲ್ಲಾ ಕಂಪನಿಯ ರೂಫ್ ಶೀಟ್ ಗಳು SQ ರಾಡ್ಸ್ ,ಆಂಗಲ್ಸ್ ಚಾನಲ್ಸ್ , ಟಿಎಮ್ ಟಿ  ಬಾರ್ ಗಳು,ಜೆಸಿಬಿ ,ಹಿಟಾಚಿ ,ಟಿಪ್ಪರ್ ಹಾಗೂ ಇನ್ನಿತರ ಅರ್ಥ್ ಮೂವರ್ ವಾಹನಗಳು ಒಂದೇ ಸ್ಥಳದಲ್ಲಿ ದೊರೆಯಲಿದೆ ಎಂದರು.
ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್ ,ಹಾಲಸ್ವಾಮಿಗೌಡ ,ಆಸೀಫ಼್ ಭಾಷಾ ,ಸಣ್ಣಕ್ಕಿ ಮಂಜು, ರವೀಂದ್ರ ಕೆರೆಹಳ್ಳಿ ,ಗಣಪತಿ , ರಮೇಶ್ ಫ್ಯಾನ್ಸಿ,ಉಲ್ಲಾಸ್ ಹಾಗೂ ಇನ್ನಿತರರಿದ್ದರು.
 
                         
                         
                         
                         
                         
                         
                         
                         
                         
                        

