ರಿಪ್ಪನ್ಪೇಟೆ : ವಿಜ್ಞಾನಿಗಳ ಅವಿರತ ಶ್ರಮದಿಂದ ಚಂದ್ರಯಾನ 3 ವಿಕ್ರಂ ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ ನಡೆಯಿತು.
ಪಟ್ಟಣದ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರಾಷ್ಟ್ರ ಧ್ವಜ ಬೀಸುತ್ತಾ ,ಘೋಷಣೆ ಕೂಗಿ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಿಸಿದರು.
ಪುಟ್ಟ ಮಗುವಿನಂಥ ರೋವರ್ನ್ನು ಒಡಲಲ್ಲಿ ಹೊತ್ತ ವಿಕ್ರಮ್ ಲ್ಯಾಂಡರ್ ತುಂಬು ಗರ್ಭಿಣಿಗೂ ಆಯಾಸವಾಗದಷ್ಟು ಮೃದುವಾಗಿ ಚಂದ್ರನ ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತಿದ್ದಂತೆಯೇ ಇತ್ತ ಇಡೀ ಭಾರತವೇ ಎದ್ದು ನಿಂತು ಕುಣಿದಾಡಿತು.
ಚಂದ್ರಯಾನ 3 ರ ಕೊನೆಯ ಕ್ಷಣಗಳನ್ನು ಉಗುರುಕಚ್ಚುತ್ತಾ ವೀಕ್ಷಿಸುತ್ತಿದ್ದ ಜನರು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ (Soft Landing) ಮಾಡುತ್ತಿದ್ದಂತೆಯೇ ಒಮ್ಮೆಗೇ ನಿರಾಳರಾಗಿ ಮತ್ತೆ ಹುಚ್ಚೆದ್ದು ಕುಣಿದರು. ಕೆಲವರು ಭಾವುಕರಾದರು, ಕೆಲವರು ಮಕ್ಕಳಂತೆ ಚಪ್ಪಾಳೆ ತಟ್ಟಿದರು. ಒಟ್ಟಿನಲ್ಲಿ ಚಂದ್ರನಲ್ಲಿ ಕಾಲಿಟ್ಟದ್ದು ತಾವೇ ಎಂಬಂತೆ ರಾಷ್ಟ್ರ ಧ್ವಜ ಬೀಸುತ್ತಾ ಮೈಮರೆತರು.
ಇದು ದೇಶದ ಎಲ್ಲೆಡೆ ಕಂಡ ದೃಶ್ಯಾವಳಿ. ಅದರಲ್ಲೂ ಮುಂಜಾನೆಯಿಂದಲೇ ಪೂಜೆ ಪುನಸ್ಕಾರ, ವೀಕ್ಷಣೆಯ ಖುಷಿಯಲ್ಲೇ ದಿನ ಕಳೆದ ಕರ್ನಾಟಕದ ಜನರಂತೂ ಇದನ್ನೊಂದು ಹಬ್ಬದಂತೆ ಸಂಭ್ರಮಿಸಿದರು. ರಾಜ್ಯದ ನಾನಾ ಭಾಗಗಳಲ್ಲಿ ಜನರು ಸಿಹಿ ಹಂಚಿದರು, ನಗಾರಿ ಬಾರಿಸಿ ನಲಿದರು, ಪಟಾಕಿ ಸಿಡಿಸಿದರು.
		 
                         
                         
                         
                         
                         
                         
                         
                         
                         
                        