Headlines

ಕೋಡೂರು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಭಾರಿ ಮುಖಭಂಗ|Koduru

ಕೋಡೂರು ಗ್ರಾಮ ಪಂಚಾಯ್ತಿ ಕಾಂಗ್ರೇಸ್ ತೆಕ್ಕೆಗೆ -ಬಿಜೆಪಿಗೆ ಭಾರಿ ಮುಖಭಂಗ,ಅಧ್ಯಕ್ಷರಾಗಿ ಉಮೇಶ ಕಲಗೋಡು ಉಪಾಧ್ಯಕ್ಷರಾಗಿ ಸುಧಾಕರ ಆಯ್ಕೆಯಾಗಿದ್ದಾರೆ

ರಿಪ್ಪನ್‌ಪೇಟೆ : ಸಮೀಪದ ಕೋಡೂರು ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಉಮೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸುಧಾಕರ್ ಆಯ್ಕೆಯಾದರು.

ಒಟ್ಟು 13 ಸದಸ್ಯರಲ್ಲಿ ಬಲವುಳ್ಳ ಪಂಚಾಯ್ತಿಯಲ್ಲಿ 4 ಕಾಂಗ್ರೆಸ್ ಬೆಂಬಲಿತ ಸದಸ್ಯರು, 9 ಬಿಜೆಪಿ ಬೆಂಬಲಿತ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ವರ್ಗಕ್ಕೆ ಮೀಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಎಲ್. ಶೇಖರಪ್ಪ, ಉಮೇಶ್ ಹಾಗೂ ಜಯಪ್ರಕಾಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ‘ಬಿ’ ವರ್ಗದ ಏಕಮಾತ್ರ ಸದಸ್ಯರಿರುವ ಕಾರಣ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುಧಾಕರ್ ನಾಮಪತ್ರ ಸಲ್ಲಿಸಿದ್ದರು. 

ಕೊನೆ ಗಳಿಗೆಯಲ್ಲಿ ಜಯಪ್ರಕಾಶ್ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಮೇಶ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯ ಶೇಖರಪ್ಪ ಕಣದಲ್ಲಿ ಉಳಿದಿದ್ದು ಮತದಾನದಲ್ಲಿ ಉಮೇಶ್ 8 ಮತ ಪಡೆದರೆ ಶೇಖರಪ್ಪ 5 ಮತ ಪಡೆದರು. 3 ಮತಗಳ ಅಂತರದಿಂದ ಅಧ್ಯಕ್ಷರಾಗಿ ಉಮೇಶ್ ಜಯಭೇರಿ ಬಾರಿಸಿದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುಧಾಕರ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಹೊಸನಗರ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಭಾಗವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ್ ಸಹಕರಿಸಿದರು.

ಕಳೆದ ಮೊದಲ ಅವಧಿಯಲ್ಲಿ ಗ್ರಾಮಾಡಳಿತದ ಅಧಿಕಾರ ಬಿಜೆಪಿ ಪಾಲಾಗಿದ್ದು ಈಗ ಕಾಂಗ್ರೆಸ್ ತಕ್ಕೆಗೆ ಹೋಗಿದೆ ಇದರಿಂದಾಗಿ ಬಿಜೆಪಿಗೆ ಮುಖಭಂಗವಾದಂತಾಗಿದೆ ಅಲ್ಲದೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚಾ ಹೋಬಳಿಯ ವ್ಯಕ್ತಿ ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಕಸಬಾ ಹೋಬಳಿಯ ವ್ಯಕ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಈ ಗ್ರಾಮ ಪಂಚಾಯತಿಯ ವಿಶೇಷವಾಗಿದೆ.


ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್,ತಾ.ಪಂ.ಮಾ.ಸದಸ್ಯ ಬಿ.ಜಿ.ಚಂದ್ರುಮೌಳಿಗೌಡರು,ಕಾಂಗ್ರೇಸ್ ಪಕ್ಷದ ತಾಲ್ಲೂಕ್ ಪ್ರಧಾನಕಾರ್ಯದರ್ಶಿ ಸದಾಶಿವಶ್ರೇಷ್ಟಿ, ವಿ.ಎಸ್.ಎಸ್.ಎನ್.ಅಧ್ಯಕ್ಷ ವೇದಾಂತಪ್ಪ ಗೌಡರು,ಗ್ರಾ.ಪಂ.ಸದಸ್ಯೆ ರೇಖಾ ಮಾಜಿ ಆಧ್ಯಕ್ಷರು ಪಕ್ಷದ ಮುಖಂಡರು ಹಾಜರಿದ್ದರು.



ಕೋಡೂರು ಗ್ರಾಪಂನಲ್ಲಿ ಒಟ್ಟು 13 ಜನ ಸದಸ್ಯರಿದ್ದು ಅದರಲ್ಲಿ 9 ಸದಸ್ಯರು ಬಿಜೆಪಿ ಬೆಂಬಲದಿಂದ ಆಯ್ಕೆಯಾಗಿದ್ದರು.ಕಳೆದ ಅವಧಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯನ್ನು ಬಿಜೆಪಿ ಅಲಂಕರಿಸಿತ್ತು ಆದರೆ ಎರಡನೇ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಇದರ ಕಿಂಗ್ ಮೇಕರ್ ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಗೌಡ ರವರಾಗಿದ್ದು ನಾಲ್ಕು ಜನರಿದ್ದ ಸದಸ್ಯರ ಬಲವನ್ನು ಎಂಟಕ್ಕೇರಿಸುವ ಮೂಲಕ ಕೋಡೂರು ಗ್ರಾಪಂ ಆಡಳಿತವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ದಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಗೌಡ

Leave a Reply

Your email address will not be published. Required fields are marked *