ರಿಪ್ಪನ್ ಪೇಟೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ.
ರಿಪ್ಪನ್‌ಪೇಟೆ;- ಹೊಸನಗರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆ- ಗಾಳಿಯಿಂದ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹಾನಿಗೊಳಗಾದ ನಷ್ಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪಟ್ಟಣದ ಗ್ರಾಮ ಪಂಚಾಯತಿ ಯ ಕುವೆಂಪುಸಭಾಭವನದಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಮಳೆಯಿಂದ ಮನೆ ಹಾಗೂ ಕೊಟ್ಟಿಗೆ ಹಾನಿಗೊಳಗಾದಲ್ಲಿ ಆ ಕುಟುಂಬಕ್ಕೆ ಜಿಲ್ಲಾಧಿಕಾರಿಗಳ ನೆರೆ ಸಂತ್ರಸ್ತ ನಿಧಿಯಿಂದ ತಕ್ಷಣವೇ ರೂ 10,000 ಪರಿಹಾರ ಕಲ್ಪಿಸಬೇಕು ಪೂರ್ಣ ಮನೆ ಕಳೆದುಕೊಂಡವರಿಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳದಲ್ಲಿ ಇದ್ದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅಡಿಕೆ ಬೆಳೆಗಾರರಿಗೆ ವಿಮಾ ಸೌಲಭ್ಯ ಮಾಡಿಸಲು ಕೇಂದ್ರ ಸರ್ಕಾರ ಜುಲೈ 31 ಅಂತಿಮ ಗಡುವು ನಿಗದಿಪಡಿಸಿದೆ. ವಿವಿಧ ಬೆಳೆಗಳ ವಿಮೆ ಯೋಜನೆಯ ಅವಧಿ ಕುರಿತು ಗ್ರಾಮೀಣ ಭಾಗದ ಪ್ರತಿಯೊಬ್ಬ ರೈತರಿಗೂ, ಅಧಿಕಾರಿ ವರ್ಗದವರು ಸಮಗ್ರ ಮಾಹಿತಿ ನೀಡಬೇಕು ಎಂದರು.
ಪ್ರತಿಯೊಬ್ಬ ಬೆಳೆಗಾರರಿಗೂ ಈ ಯೋಜನೆಯ ಸೌಲಭ್ಯ ಪಡೆದು ಕೊಳ್ಳಲು ತಿಳಿಸಿದರು.ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡಿರುವ
ಎಲೆ ಚುಕ್ಕಿ ರೋಗ ನಿಯಂತ್ರಣ ತಡೆಗೆ ನುರಿತ ತಜ್ಞರಿಂದ ಸಲಹೆ ಪಡೆದು ಬೆಳೆಗಾರರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ 13 ಮನೆಗಳು ಭಾಗಶಃ ಹಾನಿ, 3 ಮನೆ ಸಂಪೂರ್ಣ ಹಾನಿ, 3 ದನದ ಕೊಟ್ಟಿಗೆ ಕುಸಿದು ಬಿದ್ದಿವೆ.
ನವಟೂರು ಗ್ರಾಮದಲ್ಲಿ ಭಾರಿ ಮಳೆಯಿಂದ ಕೆರೆ ದಂಡೆ ಒಡೆದು ನೀರು ನುಗ್ಗಿದ ಪರಿಣಾಮ 2 ಎಕರೆ ನಾಟಿ ಮಾಡಿದ ಗದ್ದೆ ಕೊಚ್ಚಿಹೋಗಿದೆ. ಹಾಗೂ ಐದು ಜಾನುವಾರುಗಳು ಸಾವನ್ನಪ್ಪಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಳಗೊಂಡಿರುವುದರಿಂದ ಅಧಿಕಾರಿ ವರ್ಗದವರು ಸ್ವ ಸ್ಥಳದಲ್ಲಿಯೇ ಇದ್ದು, ಅನಾಹುತಗಳ ಕುರಿತು ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಸರ್ಕಾರಕ್ಕೆ ಮಾಹಿತಿ ರವಾನಿಸಬೇಕು ಎಂದರು.
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,
ಹಿಂದಿನ ರಾಜ್ಯ ಸರ್ಕಾರ ನೆರೆ ಸಂದರ್ಭದಲ್ಲಿ ಮನೆ ಹಾನಿಗಳಿಗೆ ಜಾರಿಗೊಳಿಸಿದ ಎ.ಬಿ.ಸಿ. ಮಾನದಂಡ ಅವೈಜ್ಞಾನಿಕವಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರಿಗೆ ಪೂರ್ಣ ಪ್ರಮಾಣದ ಮನೆ ನಿರ್ಮಿಸಿಕೊಳ್ಳಲು ಪೂರ್ಣ ಪ್ರಮಾಣದ ಪರಿಹಾರ ಕಲ್ಪಿಸಬೇಕು ಎಂದರು.
ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಜಿಲ್ಲಾ ಸಚಿವರು ತಿಳಿಸಿದರು.
ಪದವಿ ಪೂರ್ವ ಕಾಲೇಜ್‌ಗಳಲ್ಲಿ ಕಾರ್ಯನಿರ್ವಹಿಸಿದ ಸುಮಾರು
3, 500ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ಕಳೆದ ಸಾಲಿನ ಗೌರವ ಸಂಭಾವನೆ ಹಾಗೂ ದ್ವಿತೀಯ ಪಿಯುಸಿ ಮೌಲ್ಯಮಾಪಕರ ವೇತನ ಪಾವತಿಯಾಗದ ಕುರಿತು ಮಾಧ್ಯಮದವರು ಸಚಿವರ ಗಮನ ಸೆಳೆದಾಗ, ಈ ಕುರಿತು ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳವ ಭರವಸೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್,ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ನೇಹಲ್ ಸುಧಾಕರ್ ಲೋಕಖಂಡೆ,ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಡಿಡಿಪಿಐ ಪರಮೇಶ್ವರಪ್ಪ, ತಹಶೀಲ್ದಾರ್ ಡಿ.ಜಿ.ಕೋರಿ, ಬಿ.ಇ.ಓ. ಹೆಚ್.ಆರ್.ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ತಾ.ಪ.ಇ. ಓ ನರೇಂದ್ರ, ಗ್ರಾ.ಪಂ. ಮಂಜುಳಾ ಕೇತಾರ್ಜಿ ರಾವ್. ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.