ಶಿವಮೊಗ್ಗ : ಐನಾತಿ ಕಳ್ಳನೋರ್ವ, ಜೆಸಿಬಿ ಮೂಲಕ ಎಟಿಎಂ ಯಂತ್ರವನ್ನೇ ಕದ್ದೊಯ್ಯಲು ವಿಫಲ ಯತ್ನ ನಡೆಸಿದ ಸಿನಿಮೀಯ ಶೈಲಿಯ ಘಟನೆಯೊಂದು, ಶಿವಮೊಗ್ಗ ನಗರದ ವಿನೋಬನಗರದಲ್ಲಿ ತಡರಾತ್ರಿ ನಡೆದಿದೆ.
100 ಅಡಿ ರಸ್ತೆ ಶಿವಾಲಯ ಎದುರಿನ ಪೂರ್ಯಾನಾಯ್ಕ್ ಪೆಟ್ರೋಲ್ ಬಂಕ್ ಸಮೀಪದ ಕಟ್ಟಡವೊಂದರಲ್ಲಿರುವ, ಆಕ್ಸೆಸ್ ಬ್ಯಾಂಕ್ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ದುರಸ್ತಿ ಕಾರಣದಿಂದ, ಪೆಟ್ರೋಲ್ ಬಂಕ್ ಸಮೀಪ, ಕಳೆದ ಕೆಲ ದಿನಗಳಿಂದ ಜೆಸಿಬಿ ವಾಹನ ನಿಲ್ಲಿಸಲಾಗಿತ್ತು. ಕಿಡಿಗೇಡಿಯು ಸದರಿ ಜೆಸಿಬಿಯನ್ನು ನಕಲಿ ಕೀ ಬಳಸಿ ಚಾಲನೆಗೊಳಿಸಿದ್ದಾನೆ. ನಂತರ ಎಟಿಎಂ ಯಂತ್ರ ಕದ್ದೊಯ್ಯುವ ಯತ್ನ ನಡೆಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಅದೇ ರಸ್ತೆಯಲ್ಲಿ ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರ ಗಸ್ತು ವಾಹನ ಆಗಮಿಸಿದೆ. ಜೆಸಿಬಿ ಕಾರ್ಯಾಚರಣೆ ಗಮನಿಸಿ ಅನುಮಾನದ ಮೇರೆಗೆ ಸಂತೋಷ್ ಕುಮಾರ್ ಅವರು ಸ್ಥಳಕ್ಕೆ ತೆರಳುತ್ತಿದ್ದಂತೆ, ಜೆಸಿಬಿ ವಾಹನ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದು, ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ಎಟಿಎಂ ಕೇಂದ್ರವು ದಿನದ 24 ಗಂಟೆಯು ತೆರೆದಿರುತ್ತದೆ. ಸದರಿ ಕೇಂದ್ರಕ್ಕೆ ಕಾವಲುಗಾರರ ನಿಯೋಜನೆ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಜೆಸಿಬಿ ಬಳಕೆ ಮಾಡಿದ್ದರಿಂದ, ಎಟಿಎಂ ಯಂತ್ರದ ಮೇಲ್ಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ಎಟಿಎಂ ಕೇಂದ್ರದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳವು ಯತ್ನದ ಕೃತ್ಯ ಸೆರೆಯಾಗಿದೆ. ಪೊಲೀಸರು ಸದರಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.