ರಿಪ್ಪನ್‌ಪೇಟೆ : ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ವತಿಯಿಂದ ರೈಲು ತಡೆಗೆ ಯತ್ನಿಸಿದ ಘಟನೆ ನಡೆಯಿತು.
ಇಂದು ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗೂತ್ತ ಮೈಸೂರು – ತಾಳಗುಪ್ಪ ರೈಲು ತಡೆ ನಡೆಸಲು ಮುನ್ನುಗ್ಗುತಿದ್ದಂತೆ ಗೇಟ್ ಬಳಿಯೇ ಪೊಲೀಸರು ತಡೆದು ಕಾರ್ಯಕರ್ತರನ್ನು ಬಂಧಿಸಿದರು.
ಕಾರ್ಯಕರ್ತರನು ಬಂಧಿಸಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆತಂದು ಆ ನಂತರದಲ್ಲಿ ಬಿಡುಗಡೆಗೊಳಿಸಲಾಯಿತು.
ನಂತರ ಮಾತನಾಡಿದ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರವು ಅಕ್ಕಿ ಖರೀದಿಗೆ ಅವಕಾಶ ನಿರಾಕರಿಸಿರುವುದು ಖಂಡನೀಯ. ಬಿಜೆಪಿ ದ್ವೇಷ ರಾಜಕಾರಣ ಸಾಧಿಸುತ್ತಾ, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿರಿದ್ದು, ಪಾರದರ್ಶಕ ವ್ಯವಸ್ಥೆಯಲ್ಲಿ ಖರೀದಿಗೆ ಸರ್ಕಾರವು ಎಫ್’ಸಿಐಯನ್ನು ಕೇಳಲಾಗಿತ್ತು. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಸರ್ಕಾರವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಲಾಗಿತ್ತು. ದಾಸ್ತಾನು ಇದ್ದರು ಅಕ್ಕಿ ನೀಡಲು ನಿರಾಕರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಈ ನಡೆ ಪ್ರಮುಖವಾಗಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಕುತ್ತು ತಂದಿದೆ ಕೇಂದ್ರದ ನಿರ್ಧಾರದಿಂದ ಸುಮಾರು 1.28 ಕೋಟಿ ಕುಟುಂಬಗಳು ಮತ್ತು 4.42 ಕೋಟಿ ಜನರು ತೊಂದರೆಗೊಳಗಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಖಲೀಲ್ ಷರೀಫ್ , ಪ್ರಧಾನ ಕಾರ್ಯದರ್ಶಿ ನವೀನ್,ಪ್ರಜ್ವಲ್,ಸುನೀಲ್
ನಿದರ್ಶನ್,ಆದರ್ಶ್,ವಿನಾಯಕ ಶೆಟ್ಟಿ ,ಲೋಹಿತ್ ಹಾಗೂ ಇನ್ನಿತರರಿದ್ದರು.
ತೀರ್ಥಹಳ್ಳಿ ವಿಭಾಗದ ಡಿವೈಎಸ್ ಪಿ ಗಜಾನನ ವಾಮನ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ, ರಿಪ್ಪನ್‌ಪೇಟೆ ಪಿಎಸ್ ಐ ಪ್ರವೀಣ್ ಎಸ್ ಪಿ,ಹೊಸನಗರ ಪಿಎಸ್ ಐ ಶಿವಾನಂದ ಕೆ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.