ಶಿವಮೊಗ್ಗ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮತ್ತೊಂದು ಕ್ಯಾಂಪಸ್ ಶಿವಮೊಗ್ಗದಲ್ಲಿ ಈ ವರ್ಷದಿಂದ ಆರಂಭವಾಗುತ್ತಿದೆ.
ಪೊಲೀಸಿಂಗ್ ಮತ್ತು ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುವ ವಿಷಯಗಳನ್ನು ಈ ವಿಶ್ವವಿದ್ಯಾಲಯ ಒಳಗೊಂಡಿದ್ದು, ವಿವಿಧ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ವಿವಿಯ ಶಿವಮೊಗ್ಗ ಕ್ಯಾಂಪಸ್ನ ಕ್ರಿಮಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಶ್ರೀ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಆರಂಭಿಸಲಾಗುತ್ತಿದೆ. ಈಗಾಗಲೇ ವಿವಿಧ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬೇಕು ತಿಳಿಸಿದ್ದಾರೆ.
ರಕ್ಷಣಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಕೊಡುವ ಏಕೈಕ ವಿಶ್ವವಿದ್ಯಾಲಯ ಆರ್ಆರ್ಯು ಆಗಿದೆ. ಪೊಲೀಸ್ ಸೈನ್ಸ್, ಕಾನೂನು, ವಿಧಿವಿಜ್ಞಾನ, ಡಿಫೆನ್ಸ್ ಮತ್ತು ಅದರ ಅಧ್ಯಯನ, ಕ್ರಿಮಿನಾಲಜಿ (ಅಪರಾಧಶಾಸ್ತ್ರ), ಸೈಬರ್, ಫೊರೆನ್ಸಿಕ್, ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಮುಂತಾದ ವಿಷಯಗಳಲ್ಲಿ ಪದವಿ ಮತ್ತು ಉನ್ನತ ಶಿಕ್ಷಣ ಪಡೆಯಲು ಅವಕಾಶವಿದೆ. ಸಂಶೋಧನೆ ನಡೆಸುವವರಿಗೂ ಇದು ಉಪಯೋಗಕಾರಿಯಾಗಿದೆ ಎಂದು ಹೇಳಿದರು.
ವಿವಿಯು ಸ್ಕಾಲರ್ಶಿಪ್, ಉದ್ಯೋಗ, ಹಣಕಾಸು ನೆರವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಪಿಯು ಪಾಸಾದವರಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಲಭ್ಯವಿದೆ. ಜತೆಗೆ 4 ವರ್ಷಗಳ ಸೆಕ್ಯುರಿಟಿ ಮ್ಯಾನೇಜ್ಮೆಂಟ್ ಪದವಿ ಪಡೆಯಲು ಅವಕಾಶವಿದೆ. ಪದವಿ ಪೂರೈಸಿದವರಿಗೆ ಒಂದು ವರ್ಷದ ಪೊಲೀಸ್ ಸೈನ್ಸ್ ಮ್ಯಾನೇಜ್ಮೆಂಟ್ ಅಧ್ಯಯನಕ್ಕೆ ಅವಕಾಶವಿದೆ. ಇದರ ಹೊರತಾಗಿ ಪಿಯು ಪಾಸಾದವರಿಗೆ ಕಾರ್ಪೊರೇಟ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್, ಕೋಸ್ಟಲ್ ಸೆಕ್ಯುರಿಟಿ ಮತ್ತು ಲಾ ಎನ್ಫೋರ್ಸ್ಮೆಂಟ್, ಫಿಸಿಕಲ್ ಫಿಟ್ ನೆಸ್ ಮ್ಯಾನೇಜ್ಮೆಂಟ್ ಮೊದಲಾದ ಸರ್ಟಿಫಿಕೇಟ್ ಕೋರ್ಸ್ಗಳನ್ನು ಅಧ್ಯಯನ ಮಾಡುವ ಅವಕಾಶವಿದೆ ಎಂದರು.
ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಪ್ರವೇಶ ನೀಡಲಾಗುವುದು. ಹಾಸ್ಟೆಲ್ ವ್ಯವಸ್ಥೆ ಇರುತ್ತದೆ. ಇಲ್ಲಿ ಅಧ್ಯಯನ ಮಾಡಿದವರಿಗೆ ಪೊಲೀಸ್ ನೇಮಕಾತಿ ಮತ್ತು ರಕ್ಷಣಾ ಇಲಾಖೆಯ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಉನ್ನತ ದೇಶಭಕ್ತಿ, ಕೌಶಲ್ಯ, ಶಿಸ್ತು, ನೈತಿಕತೆಯನ್ನು ಯುವಕರಲ್ಲಿ ಬೆಳೆಸುವ ಶಿಕ್ಷಣ ಇದಾಗಿದೆ. ಇಲ್ಲಿ ತರಬೇತಿಯನ್ನು ನಿವೃತ್ತ ಮತ್ತು ಹಾಲಿ ಸೇವೆಯಲ್ಲಿರುವ ಉನ್ನತಾಧಿಕಾರಿಗಳಿಂದ ಕೊಡಿಸಲಾಗುವುದು. ಮಾನಸಿಕ ಮತ್ತು ದೈಹಿಕ ಸದೃಢತೆಗೆ ಹೆಚ್ಚಿನ ಒತ್ತು ಕೊಡಲಾಗುವುದು. ಕರ್ನಾಟಕದವರಿಗೆ ಹೆಚ್ಚಿನ ಉದ್ಯೋಗಾವಕಾದ ಸೌಲಭ್ಯ ಇದರಿಂದ ಸಿಗಲಿದೆ ಎಂದರು.