ತೀರ್ಥಹಳ್ಳಿ : ದೇಶದ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿ ತತ್ವ-ಸಿದ್ದಾಂತದಡಿ ಹುಟ್ಟಿ, ಅದನ್ನು ಬದಲಾಯಿಸದೇ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ದೊಡ್ಡ ಪಕ್ಷವಾಗಬೇಕಾದರೇ ಅಷ್ಟೇ ಜನರ ವಿಶ್ವಾಸ ಪಕ್ಷ ಗಳಿಸಬೇಕು. ವಿಶ್ವವೇ ಇವತ್ತು ಭಾರತದತ್ತ ನೋಡುವ ನಾಯಕತ್ವ ಬಿಜೆಪಿ ಹಾಗೂ ದೇಶಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ತಾಲೂಕಿನ ತೂದೂರು ಗ್ರಾಮದಲ್ಲಿ ಗುರುವಾರ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನಾಯಕತ್ವದ ಜೊತೆಗೆ ಬಡವರ ಪರವಾಗಿ ಕೆಲಸ ಮಾಡ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಖಾತೆಗೆ ಹೋಗುತ್ತಿದೆ. ರಾಜೀವ್ ಗಾಂಧಿ ನಾನು 100 ರೂ ಕೊಟ್ಟರೇ, 15 ರೂ ಹೋಗಿ ತಲುಪುತ್ತೆ ಎಂದಿದ್ದರು. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಲಿಲ್ಲ. ಆದ್ರೆ, ಪ್ರಧಾನಿ ಮೋದಿ ಪರಿಹಾರ ಕಂಡು, ಖಾತೆಗೆ ನೇರವಾಗಿ ಹಣ ತಲುಪುವಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನವರು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಐದಾರು ದಶಕಗಳಾದರೂ ಇಲ್ಲಿನ ಶರಾವತಿ ಸಂತ್ರಸ್ತರ ಪರಿಹಾರ ಕೊಡಲಿಲ್ಲ. ಈ ಹಿಂದೆ ಹಕ್ಕುಪತ್ರ ಕೊಡುವಾಗ ಕಾನೂನಿನ ತೊಡಕನ್ನು ಅವರು ಪರಿಹರಿಸಿ, ಕೊಡಲಿಲ್ಲ. ಸಮಸ್ಯೆ ಹುಟ್ಟು ಹಾಕೋದು ಅವರೇ, ಅಧಿಕಾರ ಇದ್ದಾಗ ಬಗೆಹರಿಸದೇ ಸುಮ್ಮನಿರುವುದು ಅವರೇ. ಒಬ್ಬ ವ್ಯಕ್ತಿಯನ್ನು ಎಷ್ಟು ಬಾರಿ ಮೋಸ ಮಾಡಲು ಸಾಧ್ಯ..? ಈಗ ಸಮಯ ಬಂದಿದೆ.ನಿಮ್ಮ ಈ ನಾಟಕ ಕರ್ನಾಟಕದಲ್ಲಿ ನಡೆಯಲ್ಲ ಎಂದರು.
ಜ್ಞಾನೇಂದ್ರ ಅವರು ಅಡಿಕೆ ವಿಚಾರಕ್ಕೆ ಹಲವು ಬಾರಿ ನನ್ನ ಕಾಡಿಸಿದ್ದರು. ಅದಕ್ಕೆ ನಾನು ಅರಗ ಜ್ಞಾನೇಂದ್ರ ಅಲ್ಲ.. ಅಡಿಕೆ ಜ್ಞಾನೇಂದ್ರ ಅಂತಾನೇ ಕರಿತೀದ್ದೆ. ಗೃಹಸಚಿವರಾಗಿ ಆರಗ ಉತ್ತಮ ಕೆಲಸ ಮಾಡಿದ್ದಾರೆ. ಹಿಜಾಬ್ ಗಲಾಟೆ, ಅಜಾನ್, ಕೋಮು ಗಲಭೆಯಂತ ಹಲವು ಸವಾಲುಗಳನ್ನು ದಕ್ಷವಾಗಿ ಎದುರಿಸಿದ್ದಾರೆ. ಜನರ ಬಗ್ಗೆ ಯಾವಾಗಲೂ ಕಾಳಜಿ ಇರುವ ಜನಪ್ರತಿನಿಧಿ ಅರಗ ಜ್ಞಾನೇಂದ್ರ ಎಂದರು.
ಪಿಎಸ್ಐ ಸ್ಕ್ಯಾಮ್ ಹೊರಗೆ ಬಂದಿದ್ದೇ ನಮ್ಮ ಸರ್ಕಾರದಿಂದ. ಹಿರಿಯ ಅಧಿಕಾರಿ ಸೇರಿದಂತೆ ಎಲ್ಲರೂ ಜೈಲಿಗೆ ಹೋಗಿದ್ದಾರೆ. ತನಿಖೆಯೂ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ದಪ್ಪ ಚರ್ಮದ ಸರ್ಕಾರದಂತೆ ಕೆಲಸ ಮಾಡಿತ್ತು. ಒಲೈಕೆ ಮಾಡಿಕೊಂಡೇ ರಾಜಕಾರಣ ಮಾಡಿಕೊಂಡು ಬಂದರು. ಒಂದು ಸಮುದಾಯದ ಮಕ್ಕಳನ್ನು ಮಾತ್ರ ಪ್ರವಾಸಕ್ಕೆ ಕಳುಹಿಸುವ ಕೆಲಸ ಮಾಡಿದ್ರು.ಮಕ್ಕಳು ದೇವರ ಸಮಾನ. ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವ ಕೆಲಸ ಮಾಡಿದ್ರು.
ಅದ್ರೇ, ನಮ್ಮ ಸರ್ಕಾರ ಎಲ್ಲರ ಪರವಾಗಿ ಕೆಲಸ ಮಾಡುತ್ತಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರ ಕೊಟ್ಟಿದೆ ಎಂದರು.
ಭವ್ಯವಾದ ರಾಜ್ಯ, ಭವ್ಯ ತೀರ್ಥಹಳ್ಳಿ, ಭವ್ಯ ಪ್ರಜೆಯ ಕಲ್ಯಾಣ ಅಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬಿಜೆಪಿಯ ಮಂತ್ರ. ಅದರಂತೆ ಕೆಲಸ ಮಾಡುತ್ತಿದೆ. ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಒಂದು ಶಾಸಕ ಸ್ಥಾನದಿಂದ ಈ ಹಂತಕ್ಕೆ ಬಿಜೆಪಿ ಬಂದಿದೆ. ಯಡಿಯೂರಪ್ಪ ಅವರ ಶ್ರಮ, ಹೋರಾಟಕ್ಕೆ ಮತ್ತೆ ಗೆಲುವು ಸಿಗುತ್ತೆ ಎಂದು ಬೊಮ್ಮಾಯಿ ಹೇಳಿದರು.
ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಸಿಎಂ ಬೊಮ್ಮಾಯಿ ನಮ್ಮ ತಾಲೂಕಿನ ಬೀಗರು, ಅವರಿಗೆ ಬೀಗರಿಗಾಗಿ ಏನಾದರೂ ಕೆಲಸ ಮಾಡಿಕೊಡಿ ಅಂದಿದ್ದೆ. ಹೊಸಳ್ಳಿಯ ತುಂಗಾ ಸೇತುವೆಗೆ ಬೇಡಿಕೆಯಿಟ್ಟಿದ್ದೆ. ಜತೆಗೆ ಶರಾವತಿ ಸೇತುವೆಗಾಗಿ ಮನವಿ ಮಾಡಿದ್ದೆ. ಎರಡಕ್ಕೂ ಅನುದಾನ ಮಂಜೂರು ಮಾಡಿದ್ದಾರೆ. ಸಿಎಂ ಬೊಮ್ಮಾಯಿ 250 ಕೋ ರೂ ಮೀಸಲಿಟ್ಟಿದ್ದಾರೆ. 500 ಕಾಲು ಸಂಕ ನಿರ್ಮಾಣಕ್ಕೆ ಅನುದಾನ ಇಟ್ಟಿದ್ದಾರೆ. ಅಡಕೆ ಸಂಶೋಧನಾ ಕೇಂದ್ರಕ್ಕೆ 10 ಕೋ ರೂ ಮೀಸಲಿಟ್ಟಿದ್ದಾರೆ ಎಂದರು
ಅಡಕೆಯಿಂದ ಕ್ಯಾನ್ಸರ್ ಬರುತ್ತೆ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ. ಇದರ ವಿರುದ್ಧ ವಾದಿಸಲು ನಮ್ಮ ಸರ್ಕಾರ ವಿಶೇಷ ವಕೀಲರನ್ನು ನೇಮಿಸಿದೆ. ಅಡಕೆ ಕ್ಯಾನ್ಸರ್ ಕಾರಕ ಅಲ್ಲ ಅಂತ ರಿಪೋರ್ಟ್ ಬಂದಿದೆ. ಇನ್ನು ತೀರ್ಥಹಳ್ಳಿಗೆ ಈ ಬಾರಿ ಸಾಕಷ್ಟು ಅನುದಾನ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಎದೆಯುಬ್ಬಿಸಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ತಾಲೂಕಿನಲ್ಲಿ ಅಭಿವೃದ್ಧಿಯ ಮಹಾಪೂರ ಆಗಿದೆ. ಈ ಬಾರಿ ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತೆ. ವಿರೋಧಿಗಳ ಡಿಪಾಸಿಟ್ ಹೋಗುತ್ತದೆ ಎಂದರು.
ಪಿಎಸ್ಐ ಪ್ರಕರಣದಲ್ಲಿ ನನ್ನ ವಿರುದ್ಧ ದಾಖಲೆ ಇದೆ ಅಂತಾರೆ. ತಾಕತ್ತಿದ್ದರೆ ಸಿಐಡಿಗೆ ದಾಖಲೆ ನೀಡಲಿ. ನನ್ನನ್ನು ಜೈಲಿಗೆ ಹಾಕಲಿ ಎಂದು ಕಿಮ್ಮನೆ ರತ್ನಾಕರ್ ಗೆ ಸವಾಲೆಸೆದರು. ಎಪಿಪಿ ಹಗರಣವನ್ನು ಮುಚ್ಚಿಹಾಕಿದ್ದರು. ಅಧಿಕಾರ ಇದ್ದಾಗ ಏನನ್ನೂ ಮಾಡಿಲ್ಲ. ಮಂತ್ರಿಯಾಗಿ ಪಾದಯಾತ್ರೆ ಮಾಡಿದ್ರು,ಗಿಮಿಕ್ ಗಾಗಿ ಪಾದಯಾತ್ರೆ ಮಾಡೋದಲ್ಲ.
ಅವರು ಶಿಕ್ಷಣ ಸಚಿವರಾಗಿದ್ದಾಗ ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಆಯ್ತು 10 ಜನ ನೇಣು ಹಾಕಿಕೊಂಡ್ರು. ತನ್ನನ್ನು ಹೊಗಳಿ, ಇತರರಿಗೆ ತೇಜೋವಧೆ ಮಾಡೋದಲ್ಲ ನನ್ನ ಕಡೆಯೂ ದಾಖಲೆ ಇದೆ, ಬಾಯಿಬಿಟ್ಟರೆ ಎಲ್ಲವನ್ನೂ ಅನಾವರಣ ಮಾಡುವೆ. ನಾನು ಈ ಬಾರಿ ಸಾಧನೆ ಮೇಲೆ ಚುನಾವಣೆಗೆ ಹೋಗ್ತೇನೆ. ಸೋಗಲಾಡಿಗರ ಮುಂದೆ ನಮ್ಮ ಮತ ಕಡಿಮೆ ಆಗಬಾರದು ಎಂದರು.