ರಿಪ್ಪನ್‌ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ – ಹರತಾಳು ಹಾಲಪ್ಪ|Rpet

ರಿಪ್ಪನ್‌ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ನೀವು ಕೊಟ್ಟ ಅಧಿಕಾರದಿಂದ ಯಥೇಚ್ಛವಾಗಿ ಅನುದಾನ ತರಲು ಸಾಧ್ಯವಾಗಿದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.




ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸುಮಾರು 5.50 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅಭಿನಂದನೆ ಸ್ವೀಕರಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಗರ ರಸ್ತೆಯ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಮಾಡುವುದರ ಮೂಲಕ ಡಿವೈಡರ್ ಅಳವಡಿಸಿ ಶಾಲಾ ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಲು ಸುಸಜ್ಜಿತ ರಸ್ತೆ ನಿರ್ಮಿಸುತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.


ಮುಂದಿನ ದಿನಗಳಲ್ಲಿ ಹೊಸನಗರ-ಶಿವಮೊಗ್ಗ-ಸಾಗರ-ತೀರ್ಥಹಳ್ಳಿ ರಸ್ತೆಯನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ಅನುದಾನ ತರುವುದಾಗಿ ಹೇಳಿದರು.

ಎರಡು ಬಾರಿ ಶಾಸಕರಾಗಿ ವಿಧಾನಸಭಾ ಕಲಾಪದಲ್ಲಿ ಒಂದು ಮಾತನ್ನು ಆಡದೇ ರೆಸಾರ್ಟ್ ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸಿ ಈಗ ಮಾಜಿಯಾಗಿರುವ ವ್ಯಕ್ತಿಯೊಬ್ಬರು ಕಲರ್ ಕಲರ್ ಬಟ್ಟೆ ಹಾಕಿಕೊಂಡು ಕಪ್ಪು ಕನ್ನಡ ಬಳಸಿ ಬಂಗಾರಪ್ಪರಂತಾಗಲು ಹೋಗುತ್ತಿದ್ದಾರೆ. ಬಂಗಾರಪ್ಪನವರಿಗೆ ಸರಿಸಾಟಿ ಯಾರು ಇಲ್ಲ ಅವರ ವ್ಯಕ್ತಿತ್ವವೇ ಬೇರೆ, ಕ್ಷೇತ್ರದಲ್ಲಿ ಅಗಿರುವಂತಹ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಮತದಾರರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ, ಹೊಟ್ಟೆ ಕಿಚ್ಚು ಬಿಟ್ಟು ಸ್ವಾಭಿಮಾನದಿಂದ ಇರಲಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಪರೋಕ್ಷವಾಗಿ ಕುಟುಕಿದರು.




ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಕಂಡಿದ್ದು ಸಾಕಷ್ಟು ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿದ್ದು ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಡಬಲ್ ಇಂಜಿನ್ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ನೀಡಿದೆ ಎಂದು ಹೇಳಿದ ಅವರು ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ ನೀಡುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರನ್ನು ಎಳೆದೊಯ್ದ ಪೊಲೀಸರು :


ಸಾಗರ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ನಡೆಸಿ ಶಾಸಕ ಹರತಾಳು ಹಾಲಪ್ಪ ವೇದಿಕೆಗೆ ಆಗಮಿಸುತಿದ್ದಂತೆ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಒಂದು ಅರ್ಜಿಯನ್ನು ಶಾಸಕರಿಗೆ ಕೊಡಲು ಬಂದಾಗ ಶಾಸಕರು ಮನವಿ ಸ್ವೀಕರಿಸಲು ಸಿದ್ದರಿದ್ದರು ಆ ಸಂಧರ್ಭದಲ್ಲಿ ಮನವಿಯನ್ನು ಮೈಕ್ ನಲ್ಲಿ‌ ಓದುತ್ತೇನೆ ಎಂದು ಟಿ ಆರ್ ಕೃಷ್ಣಪ್ಪ ಹಠ ಹಿಡಿದಾಗ ಸ್ಥಳೀಯ ಮುಖಂಡರು ವಿರೋಧಿಸಿದರು.

ನಂತರ ವೇದಿಕೆಯಲ್ಲಿ ಕೂಗಲಾರಂಭಿಸಿದಾಗ ಶಾಸಕರ ಬೆಂಬಲಿಗರು ಪೊಲೀಸರನ್ನು ಕರೆಯಿಸಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರವರನ್ನು ಬಲವಂತವಾಗಿ ಎಳೆದೊಯ್ದರು.

ಅವರು ಸಲ್ಲಿಸಲು ಬಂದ ಮನವಿ ಪತ್ರದ ಬಗ್ಗೆ ಟಿ ಆರ್ ಕೃಷ್ಣಪ್ಪ ರವರಲ್ಲಿ ಮಾಹಿತಿ ಕೇಳಿದಾಗ ಅದರಲ್ಲಿ ರಸ್ತೆ ಅಗಲೀಕರಣ ಸಂಧರ್ಭದಲ್ಲಿ ಈ ಮೊದಲು ತೆಗೆದಿದ್ದ ಬಾಕ್ಸ್ ಚರಂಡಿಯೊಳಗೆ ರಸ್ತೆ ನಿರ್ಮಿಸಲು ಹಾಗೂ ಯಾವ ಕಟ್ಟಡಕ್ಕೂ ಹಾನಿಯಾಗದಂತೆ ಕಾಮಗಾರಿ ನಡೆಸಬೇಕೆಂದು ಸುಮಾರು 100 ಜನ ಸಾರ್ವಜನಿಕರು ಸಹಿ ಹಾಕಿ ನನ್ನ ಬಳಿ ಕೊಡಲು ಹೇಳಿದ್ದರು ಎಂದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಯಿತೇ?????

ಸೋಮವಾರ ಸಂಜೆ ವಿನಾಯಕ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾಗಿದ್ದು ಅದರಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಕೇವಲ ಒಂದು ಪಕ್ಷದ ವೇದಿಕೆಯಾಗಿತ್ತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.



Leave a Reply

Your email address will not be published. Required fields are marked *