ರಿಪ್ಪನ್ಪೇಟೆ : ಸಮೀಪದ ಶ್ರೀಕ್ಷೇತ್ರ ಹೊಂಬುಜದಲ್ಲಿ ಇಂದು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುವಂತಹ ಕಾರ್ಯಕ್ರಮವೊಂದನ್ನು ಹೊಂಬುಜ ಮಠದ ವತಿಯಿಂದ ಆಯೋಜಿಸಲಾಗಿತ್ತು.
ಕೆಲವೊಂದು ಕಾರಣಗಳಿಂದ ಕೈ ಮತ್ತು ಕಾಲು ಕಳೆದುಕೊಂಡ 72 ವಿಕಲಚೇತನರಿಗೆ ಕೈ ಮತ್ತು ಕಾಲು ಉಚಿತವಾಗಿ ಜೋಡಿಸುವ ಕಾರ್ಯಕ್ರಮದಲ್ಲಿ ಕಣ್ಣಂಚನ್ನು ತೇವಗೊಳಿಸುವಂತಹ ಕೆಲವೊಂದು ಘಟನೆಗಳು ನಡೆದವು.
ಹನ್ನೊಂದು ವರ್ಷದ ವಿಕಲಚೇತನ ಬಾಲಕ ಅಪಘಾತದಲ್ಲಿ ಎರಡು ವರ್ಷದ ಹಿಂದೆ ಕಾಲು ಕಳೆದುಕೊಂಡು ತನ್ನ ಬಾಳಿನಲ್ಲಿನ ಇನ್ನು ನಡೆಯಲು ಸಾಧ್ಯವೇ ಇಲ್ಲವೆನೋ ಎಂಬ ಮನಸ್ಥಿತಿಯಲ್ಲಿದ್ದ… ಆ ಬಾಲಕನಿಗೆ ಕಾಲು ಜೋಡಿಸುತ್ತಲೇ ಅವನ ಕಣ್ಣಂಚಿನಲ್ಲಿ ಜಾರಿದ ಒಂದು ಹನಿ ಆನಂದಭಾಷ್ಪ ಅವನನ್ನು ಉತ್ತಮ ಭವಿಷ್ಯಕ್ಕೆ ಕೈ ಚಾಚಿ ಕರೆಯುವಂತೆ ಇತ್ತು…ಮರು ಕ್ಷಣವೇ ಕೃತಕ ಕಾಲಿನ ಸಹಾಯದಿಂದ ತನ್ನ ಮೆಚ್ಚಿನ ಸೈಕಲ್ ಏರಿ ಹೊರಟ ಬಾಲಕನ ಮನಸ್ಸಲ್ಲಿ ಹುಮ್ಮಸಿತ್ತು,ಜೀವನದ ಬಗ್ಗೆ ಒಲವಿತ್ತು,ಭವಿಷ್ಯದ ಕನಸಿತ್ತು…..
ಇನ್ನೊಬ್ಬರು 60 ವಯಸ್ಸಿನ ಅಸುಪಾಸಿನ ವ್ಯಕ್ತಿ ಅವರ ಬಲಗೈ ಕಳೆದ ಕೆಲ ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತುಂಡಾಗಿತ್ತು, ಇಂದು ಆ ವ್ಯಕ್ತಿಗೆ ಕೃತಕ ಕೈ ಜೋಡಿಸಿದ ಮರುಕ್ಷಣವೇ ಅಲ್ಲಿದ್ದ ಒಂದು ಹಾರವನ್ನು ಬಲಗೈನಿಂದ ಎತ್ತಿಕೊಂಡು ಹೊಂಬುಜಾ ಶ್ರೀ ಗಳಿಗೆ ಹಾಕಿ ನೆರೆದಿದ್ದವರಿಗೆ ಹಸ್ತಲಾಘವ ಮಾಡುತಿದ್ದದ್ದು ಮಕ್ಕಳು ಚಿಕ್ಕಂದಿನಲ್ಲಿ ಮೊದಮೊದಲು ಹಸ್ತಲಾಘವ ಮಾಡುವಂತೆ ಇತ್ತು.
ಹೀಗೆ ಹತ್ತು ಹಲವಾರು ಭಾವುಕ ಕ್ಷಣಗಳು ನೆರೆದಿದ್ದವರ ಮನಸ್ಸಿನಲ್ಲಿ ಶ್ರೀಕ್ಷೇತ್ರ ಮಠದ ಬಗ್ಗೆ ಅಪಾರ ಅಭಿಮಾನ ಉಕ್ಕಿ ಹರಿಯಿವಂತೆ ಮಾಡಿತು.
ಹೊಂಬುಜ ಜೈನ ಮಠ ಮತ್ತು ಶ್ರೀ ಪದ್ಮಾವತಿ ಎಜುಕೇಷನಲ್ ಟ್ರಸ್ಟ್, ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ ಹಾಗೂ ಹುಬ್ಬಳ್ಳಿ ಮಹಾವೀರ್ ಲಿಂಬ್ ಸೆಂಟರ್ ಹುಬ್ಬಳ್ಳಿ ದಿಗಂಬರ್ ಜೈನ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜನಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರದ ಉದ್ಘಾಟನೆ ನೆರವೇರಿಸಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹುಂಚ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ ವಿಕಲಚೇತನರು ಎಂಬ ಸಂಕುಚಿತ ಭಾವನೆಯಿಂದ ತಮ್ಮ ಬದುಕು ಹಾಳು ಮಾಡಿಕೊಳ್ಳದೇ ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದರು
ಜೈನ ಅನಾದಿಕಾಲದಿಂದಲೂ ಪರೋಪಕಾರವೇ ಜೈನ ಧರ್ಮದ ಮೂಲ ಮಂತ್ರವಾಗಿದ್ದು ಅದರನ್ವಯ ಸಕಲ ಜೀವಾತ್ಮಗಳಲ್ಲಿಯೂ ಪರಸ್ಪರ ಉಪಕಾರ ಭಾವನೆ ಇರುತ್ತದೆ. ತಾನು ಬದುಕಿ ಇನ್ನೊಬ್ಬರನ್ನು ಬದುಕಿಸುವ ಮನೋಭಾವವೇ ಪರೋಪಕಾರವೆಂದು ಹೇಳಿದ ಶ್ರೀಗಳು, ಜೈನ ಧರ್ಮ, ಮಾನವಧರ್ಮ, ಮನುಷ್ಯ ಧರ್ಮದಲ್ಲಿ ಸಹಕಾರ ಮನೋಭಾವನೆ ಅಗತ್ಯವಾಗಿದೆ ಎಂದ ಅವರು ಮೂರ್ನಾಲ್ಕು ವರ್ಷ ಕೃತಕ ಕೈ, ಕಾಲು ಜೋಡಣೆಯ ನಿರ್ವಹಣಾ ವೆಚ್ಚವನ್ನು ಮಠದ ವತಿಯಿಂದ ಭರಿಸುವುದಾಗಿ ಶ್ರೀಗಳು ಪ್ರಕಟಿಸಿದರು.
ಹುಬ್ಬಳ್ಳಿ ಮಹಾವೀರ್ ಲಿಂಬ್ ಸೆಂಟರ್ ಮಹೇಂದ್ರ ಸಿಂಘೆ ಮಾತನಾಡಿ, ಮೊದಲು ಜೈಪುರಕ್ಕೆ ಹೋಗಿ ಈ ಸೌಲಭ್ಯವನ್ನು ಪಡೆಯಬೇಕಾಗಿತ್ತು ಇದರಿಂದಾಗಿ ಬಡಕೂಲಿ ಕಾರ್ಮಿಕರು ತಮ್ಮ ಭವಿಷ್ಯವೇ ಇಲ್ಲಿಗೆ ಮುಗಿಯಿತು ಎಂಬ ಭಾವನೆಯಲ್ಲಿ ಧೈರ್ಯ ಕಳೆದುಕೊಂಡಿದ್ದರು ಅದರೆ ನಮ್ಮ ಸಂಸ್ಥೆ ಕಳೆದ 25 ವರ್ಷಗಳಿಂದ 45 ಸಾವಿರ ನಮ್ಮ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಉಚಿತವಾಗಿ ಇಂತಹ ಜನಕಲ್ಯಾಣ ಸೇವಾ ಕಾರ್ಯವನ್ನು ಮಾಡಲಾಗುತ್ತಿದ್ದು ಇದಕ್ಕೆ ಹೊಂಬುಜ ಶ್ರೀಗಳು ಮೌನಕ್ರಾಂತಿಯ ಮೂಲಕ ಮಾನವೀಯ ಸೇವೆಯನ್ನು ಶ್ರೀಗಳು ಮಾಡುತ್ತಿದ್ದಾರೆಂದರು.
ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಡಾ.ಜೀವನಧರ ಜೈನ, ಗೌತಮ್ ಗೆಲ್ಹೋಟ್, ಪ್ರಕಾಶಕಠಾರಿ ಇನ್ನಿತರರು ಉಪಸ್ಥಿತರಿದ್ದರು.
ರತ್ನಕುಮಾರ್ ಸ್ವಾಗತಿಸಿದರು. ಶ್ರೀಕಾಂತ ನಿರೂಪಿಸಿದರು. ನಿವೃತ್ತ ಶಿಕ್ಷಕ ಮಂಜಪ್ಪ ವಂದಿಸಿದರು.