ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸೋಮವಾರ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ.
ಈ ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
’20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ತೀರ್ಮಾನ ಮಾಡಿದ್ದೇವೆ. ಅಧಿವೇಶನದಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಿದ್ದೇವೆ’ ಎಂದು ಇತ್ತೀಚೆಗೆ ಯಡಿಯೂರಪ್ಪ ಅವರು ಹೇಳಿದ್ದರು.
ಸರ್ಕಾರ ಹಾಗೂ ಯಡಿಯೂರಪ್ಪ ರವರ ನಿರ್ಧಾರ ಸ್ವಾಗತಾರ್ಹ :
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಇಡಲು ಸಚಿವ ಸಂಪುಟದ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಹೇಳಿದರು.
ಅವರು ಇಂದು ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೇಶ ಕಂಡ ಅಪ್ರತಿಮ ಕವಿ,ಜ್ಞಾನಪೀಠ ಪುರಸ್ಕೃತ ರಾಷ್ಟ್ರ ಕವಿ ಕುವೆಂಪುರವರ ಹೆಸರನ್ನು ಅಂತಿಮಗೊಳಿಸಿರುವುದು ಸ್ವಾಗತಾರ್ಹವಾಗಿದೆ. ಕುವೆಂಪು ರವರ ಹೆಸರನ್ನೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂತಿಮಗೊಳಿಸುವಂತೆ ಜೆಡಿಎಸ್ ಮತ್ತು ಶಾಂತವೇರಿ ಗೋಪಾಲಗೌಡರ ವೇದಿಕೆ ಕಳೆದ ಎರಡು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತಿದ್ದು ನಮ್ಮ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯವಾಗಿದೆ ಎಂದರು.
ಯಡಿಯೂರಪ್ಪನವರು ಆತ್ಮಪೂರ್ವಕವಾಗಿ ಬಿಟ್ಟುಕೊಟ್ಟಿದ್ದು,ಈ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ತೋರಿದ ಹೆಗ್ಗಳಿಕೆ ಅವರದಾಗಿದೆ ಎಂದರು.
ಈ ಸಂಧರ್ಭದಲ್ಲಿ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ , ಜಿಲ್ಲಾ ಕಾರ್ಯದರ್ಶಿ ಜಿ ಎಸ್ ವರದರಾಜ್ ಹಾಗೂ ಇನ್ನಿತರರಿದ್ದರು.