ಕಾರು ಕಳ್ಳತನದ ಪ್ರಕರಣವೊಂದರಲ್ಲಿ ದೂರು ನೀಡಿದ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಾರಿನ ಮಾಲೀಕ ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನ ಬಳಿ ಕೊಟ್ಟು ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28), ದಾವಣೆಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತರು.
14 ಮೇ 2022 ರಂದು ಸೂಳೆಬೈಲು ಸಮೀಪದ ಕುಂಚಿಟಿಗರ ಬೀದಿಯಲ್ಲಿರುವ ತನ್ನ ಹಳೆ ಮನೆ ಬಳಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ಕಳ್ಳತನವಾಗಿದೆ ಎಂದು ಚಂದ್ರು ಕುಮಾರ್ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದ.
ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ, ಚಂದ್ರು ಕುಮಾರ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತನೊಂದಿಗೆ ಸಂಚು ರೂಪಿಸಿದ್ದ. ಇದೆ ಕಾರಣಕ್ಕೆ ಚಂದ್ರು ಕುಮಾರ್ ತನ್ನ ಟೊಯೊಟಾ ಯಾರಿಸ್ ಕಾರನ್ನು ಪ್ರಶಾಂತ್ ಗೆ ಕೊಟ್ಟು ದಾವಣಗೆರೆಗೆ ಕಳುಹಿಸಿದ್ದ. ಈ ವೇಳೆ ಕಾರಿನ ನಂಬರ್ ಪ್ಲೇಟನ್ನು ಬದಲಾವಣೆ ಮಾಡಿದ್ದರು.
ತನಿಖೆ ನಡೆಸಿದ ಪೊಲೀಸರು ಕಾರು ಮಾಲೀಕ ಚಂದ್ರು ಕುಮಾರ್ ಮತ್ತು ಪ್ರಶಾಂತ್ ನನ್ನು ಬಂಧಿಸಿದ್ದಾರೆ. 10 ಲಕ್ಷ ರೂ. ಮೌಲ್ಯದ ಕಾರು, ನಕಲಿ ನಂಬರ್ ಪ್ಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ತುಂಗಾ ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸ್ಐ ದೂದ್ಯನಾಯ್ಕ, ಎ.ಎಸ್.ಐ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ಅರಿಹಂತ ಶಿರಹಟ್ಟಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.